ಸಂಸ್ಕೃತಿ ಉಳಿಸುವ ಜವಾಬ್ದಾರಿ ನಾಗರಿಕರದ್ದು

RAMU MOOLAGI
Published on

ಹುಬ್ಬಳ್ಳಿ : ಜಗತ್ತಿನ ಪ್ರತಿಯೊಂದು ದೇಶಕ್ಕೆ ಇರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಗುಣವು ಆಯಾ ದೇಶದ ನಾಗರಿಕರಲ್ಲಿಬೇಕು ಎಂದು ಧಾರವಾಡ ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ರಾಮು ಮೂಲಗಿ ಹೇಳಿದರು.

ಇಲ್ಲಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಅಮೃತ ಕಳಶ ಯಾತ್ರೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಬಹುಸಂಸ್ಕೃತಿಯ ವೈವಿಧ್ಯಮಯ ರಾಷ್ಟ್ರ ಭಾರತ. ಇದರ ಅರಿವು ಪ್ರತಿಯೊಬ್ಬ ಪ್ರಜೆಗೂ ಇರಬೇಕು. ಪರಸ್ಪರ ಸಂಸ್ಕೃತಿಯನ್ನು ಗೌರವಿಸುವ ಹಾಗೂ ಉಳಿಸಿಕೊಂಡು ಹೋಗುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಭಾರತವು ಪ್ರಗತಿಯ ಹಾದಿಯಲ್ಲಿದ್ದು ವಿಶ್ವಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.

ಅಭಿಯಾನದ ಕುರಿತು ಮಾಹಿತಿ ನೀಡಿದ ಭೂಮಿ ಪ್ರತಿಷ್ಠಾನ ಅಧ್ಯಕ್ಷ ಡಾ. ಶಿವಾನಂದ ಟವಳಿ, ಧಾರವಾಡ ಜಿಲ್ಲೆಯ ವಿವಿಧ ಜನನಿಬಿಡ ಪ್ರದೇಶದಲ್ಲಿ ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರಿವು ಮೂಡಿಸುವ ಜವಾಬ್ದಾರಿಯು ಭೂಮಿ ಪ್ರತಿಷ್ಠಾನ ಮಾಡುತ್ತಿದೆ ಎಂದರು.

ಧಾರವಾಡ ಜಿಲ್ಲೆಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಜೀವ ದುಮಕನಾಳ ಮಾತನಾಡಿದರು. ಪ್ರಗತಿ ಕುಸುಬಿ, ಲತಾ ನಾಯಕ, ಸುಜಾತಾ ಪಾಟೀಲ, ಸ್ವಪ್ನಾ ಯರಗಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಮಹೇಂದ್ರಕುಮಾರ ಸ್ವಾಗತಿಸಿದರು. ಲಲಿತಾ ಚಾಕಲಬ್ಬಿ ನಿರೂಪಿಸಿದರು. ಸುನೀಲ ಶಾನವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net