

ತುಮಕೂರು: ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಲ್ಲಿ ಬೋಧನೆಗೆ ಪಿಎಚ್‌ಡಿ ಕಡ್ಡಾಯವಾದ ಹಿನ್ನೆಲೆಯಲ್ಲಿ ಸಂಶೋಧನೆಗೆ ಬೇಡಿಕೆ ಸೃಷ್ಟಿಯಾಗಿದೆ. ತುಮಕೂರು ವಿವಿ ಪಿಎಚ್‌ಡಿ ಅರ್ಹತಾ ಪರೀಕ್ಷೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದು, ಸಂಶೋಧನಾ ವಲಯದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ವಿವಿಯ 18 ವಿಭಾಗಗಳಲ್ಲಿ ಲಭ್ಯವಿದ್ದ 192 ಸೀಟುಗಳಿಗೆ ಬರೋಬ್ಬರಿ 2213 ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗಿನ ದಾಖಲೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೇವಲ 600 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.ಪ್ರಾಧ್ಯಾಪಕರಾಗುವ ಆಸೆ ಹೊಂದಿರುವ ವಿದ್ಯಾರ್ಥಿಗಳು ಪಿಎಚ್‌ಡಿಗೆ ಆಸಕ್ತಿ ತೋರಿದ್ದು ಹೆಚ್ಚು ಸಂಶೋಧನಾ ಪ್ರಬಂಧಗಳು ಹೊರಬರುವ ಸಾಧ್ಯತೆಯಿದೆ.
ಜೀವ ತಂತ್ರಜ್ಞಾನ ವಿಷಯದಲ್ಲಿ ಲಭ್ಯವಿದ್ದ 2 ಸ್ಥಾನಕ್ಕೆ 18 ಅರ್ಜಿ, ಜೀವ ರಸಾಯನಶಾಸ್ತ್ರ 10ಕ್ಕೆ 30, ರಸಾಯನಶಾಸ್ತ್ರ 32ಕ್ಕೆ 85, ವಾಣಿಜ್ಯಶಾಸ್ತ್ರ 15ಕ್ಕೆ 520, ಅರ್ಥಶಾಸ್ತ್ರ 25ಕ್ಕೆ 168, ಇಂಗ್ಲಿಷ್ 17ಕ್ಕೆ 224, ಪರಿಸರ ವಿಜ್ಞಾನ 2ಕ್ಕೆ 15, ಇತಿಹಾಸ 8ಕ್ಕೆ 92 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕನ್ನಡ 10ಕ್ಕೆ 310, ಗ್ರಂಥಾಲಯ 8ಕ್ಕೆ 117, ಎಂಬಿಎ 3ಕ್ಕೆ 111, ಗಣಿತಶಾಸ್ತ್ರ 6ಕ್ಕೆ 75, ಸೂಕ್ಷ್ಮಜೀವಶಾಸ್ತ್ರ 4ಕ್ಕೆ 17, ಭೌತಶಾಸ್ತ್ರ 8ಕ್ಕೆ 92, ರಾಜ್ಯಶಾಸ್ತ್ರ 25ಕ್ಕೆ 174, ಸಮಾಜಕಾರ್ಯ 8ಕ್ಕೆ 76, ಸಮಾಜಶಾಸ್ತ್ರ 3ಕ್ಕೆ 62 ಹಾಗೂ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಲಭ್ಯವಿದ್ದ 6 ಸೀಟುಗಳಿಗೆ 27 ಜನರು ಅರ್ಜಿ ಸಲ್ಲಿಸಿದ್ದು ವಿಶೇಷ ಎನಿಸಿದೆ.
2213 ಅರ್ಜಿಗಳ ಪೈಕಿ 1712 ಸ್ವಿಕೃತವಾಗಿದ್ದವು, ಈ ಪೈಕಿ ಜ.27ರಂದು ನಡೆದ ಅರ್ಹತಾ ಪರೀಕ್ಷೆಯಲ್ಲಿ 1562 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಈಗಾಗಲೇ 16 ವಿಭಾಗಗಳ ಫಲಿತಾಂಶ ಪ್ರಕಟವಾಗಿದ್ದು ಬಹುತೇಕರು ಅರ್ಹತಾ ಅಂಕವಾಗಿದ್ದ 50ರ ಗಡಿ ದಾಟದಿರುವುದು ಆಯ್ಕೆಯನ್ನು ಸುಲಭವಾಗಿದೆ.
ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದ ವಾಣಿಜ್ಯಶಾಸ್ತ್ರ, ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಮೌಲ್ಯಮಾಪನ ಕಾರ್ಯ ನಡೆಯುವುದು ತಡವಾಗಿರುವ ಕಾರಣಕ್ಕೆ ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಸಂದರ್ಶನಕ್ಕೆ ಅರ್ಹತೆ ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು 100 ಅಂಕಗಳಲ್ಲಿ ಕನಿಷ್ಠ 50 ಹಾಗೂ ಪರಿಶಿಷ್ಟ ವಿದ್ಯಾರ್ಥಿಗಳು ಶೇ.45 ಅಂಕ ಪಡೆಯುವುದು ಕಡ್ಡಾಯವಾಗಿದೆ.
ವಿಭಾಗದ ಹಿರಿಯ ಪ್ರಾಧ್ಯಾಪಕರು ನಡೆಸುವ ಸಂದರ್ಶನ 50 ಅಂಕಗಳಿಗೆ ನಡೆಯಲಿದ್ದು, ಹೆಚ್ಚು ಅಂಕ ಪಡೆದವರು ಸಂಶೋಧನೆಗೆ ಅರ್ಹತೆ ಪಡೆಯಲಿದ್ದಾರೆ. ತುಮಕೂರು ವಿವಿ ಇತಿಹಾಸದಲ್ಲಿಯೇ ಅತೀ ಹೆಚ್ಚು ಸೀಟುಗಳಿಗೆ ಅರ್ಜಿ ಆಹ್ವಾನಿಸಿದ್ದು ಮುಂದಿನ ಐದು ವರ್ಷದಲ್ಲಿ ನೂರಾರು ಸಂಶೋಧನಾ ಪ್ರಬಂಧಗಳು ಹೊರಬರಲಿವೆ.
ಶಿಕ್ಷಣದಿಂದ ಸಮಾಜಕ್ಕೆ ಕೊಡುಗೆ ನೀಡಲು ಸಂಶೋಧನೆಗಳಿಂದ ಸಾಧ್ಯವಾಗಲಿದೆ, ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ತುಮಕೂರು ವಿವಿಯಲ್ಲಿನ ಸಂಶೋಧನೆಯಲ್ಲಿನ ಗುಣಮಟ್ಟ ಬಹಳಷ್ಟು ಜನರನ್ನು ಆಕರ್ಷಿಸಿದೆ, ದೂರದ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಪ್ರವೇಶ ಬಯಸಿದ್ದಾರೆ. ಗುಣಮಟ್ಟದ ಸಂಶೋಧನಾ ಪ್ರಬಂಧಗಳಿಗೆ ಆದ್ಯತೆ ಇರಲಿದೆ. ವೈ.ಎಸ್.ಸಿದ್ದೇಗೌಡ, ಕುಲಪತಿ, ತುಮಕೂರು ವಿವಿ ಸಂಶೋಧನೆ ಮಾಡುವುದು ವಿದ್ಯಾರ್ಥಿಗಳ ಕನಸಾಗಿರುತ್ತದೆ, ವಿವಿ ಮಾರ್ಗದರ್ಶನದಲ್ಲಿ ಗುಣಮಟ್ಟದ ಪ್ರಬಂಧದ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಿದರೆ ಕಲಿತ ವಿದ್ಯೆ ಸಾರ್ಥಕ ಎಂಬ ಹಿನ್ನೆಲೆಯಲ್ಲಿ ಪಿಎಚ್‌ಡಿ ಅರ್ಹತಾ ಪರೀಕ್ಷೆ ಬರೆದಿದ್ದೇನೆ. ಕೆ.ಅಮೃತಾ ಪಿಎಚ್‌ಡಿ ಆಕಾಂಕ್ಷಿ