

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸ್ವತಂತ್ರ್ಯ ದಿನದ ಸಂಭ್ರಮಾಚರಣೆಯ ಜತೆಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಮಹನೀಯರ ಸ್ಮರಣೆ ಮಾಡಬೇಕಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಸಮಿತಿಯಿಂದ 78ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಯೋಧರಿಗೆ ಸಮರ್ಥ ಸೇನಾನಿ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಯಿಂದ ಮೊದಲ್ಗೊಂಡು ಸಾವಿರಾರು ಮಂದಿಯ ಧೀಮಂತ ನಾಯಕರುಗಳ ನಿಸ್ವಾರ್ಥತತೆಯ ಹೋರಾಟದ ಪ್ರತಿಫಲವೇ ಸ್ವಾತಂತ್ರ್ಯ. ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕನೂ ಜೀವನದುದ್ದಕ್ಕೂ ತನ್ನ ಒಂದೇ ಕುಟುಂಬದ ಉನ್ನತಿಗೆ ಶ್ರಮಿಸದೆ ದೇಶಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಸೇವೆ ಮಾಡುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದೇಶ ರಕ್ಷಣೆಗಾಗಿ ನಿತ್ಯ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಯೋಧರ ಕಾರ್ಯ ಮಹತ್ವವಾದದ್ದು. ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಿವೃತ್ತ ಯೋಧರನ್ನು ಗೌರವಿಸುತ್ತಿರುವ ಕರವೇ ಸಂಘಟನೆ ಕಾರ್ಯ ಮಾದರಿ ಎಂದರು.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ದೇಶಸೇವೆ ಪ್ರತಿ ಎಲ್ಲರ ಕರ್ತವ್ಯ. ಲಕ್ಷಾಂತರ ಮಂದಿಯ ಹೋರಾಟ, ಬಲಿದಾನದಿಂದ ದೇಶಕ್ಕೆ ಸ್ವತಂತ್ರ್ಯ ದೊರಕಿದೆ. ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಜಿ.ಉಮೇಶ್‌ಗೌಡ, ಮಂಜೇಶ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ಬಿಎಂಟಿಸಿ ಮಾಜಿ ನಿರ್ದೇಶಕ ಮೂರ್ತಿ, ಹಿತ ಚಿಂತನಾ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ವಿ.ರಾಮಸ್ವಾಮಿ, ಜಯದೇವ ಆಸ್ಪತ್ರೆಯ ಡಾ.ನಟರಾಜು, ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ, ಕಾರ್ಯಾಧ್ಯಕ್ಷ ಹನುಮಂತರಾಜು ಇದ್ದರು.