ಅಮಾನತ್ತಾಗಿದ್ದ ಸಂಪ್ಯ ಎಸ್‌ಐ ಮತ್ತೆ ಕರ್ತವ್ಯಕ್ಕೆ ಹಾಜರು

Published on

ಪುತ್ತೂರು ಗ್ರಾಮಾಂತರ: ಪುತ್ತೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದ ಆರೋಪದಡಿ ಸೇವೆಯಿಂದ ಅಮಾನತುಗೊಂಡಿದ್ದ ಸಂಪ್ಯ ಠಾಣೆ ಎಸ್‌ಐ ಶ್ರೀನಾಥ್ ರೆಡ್ಡಿ ಅವರ ಅಮಾನತು ಅವಧಿ ಮುಕ್ತಾಯಗೊಂಡಿದ್ದು, ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರನ್ನು ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣೆ ಎಸ್‌ಐ ಆಗಿ ಹಾಗೂ ಪಿಸಿ ಹರ್ಷಿತ್ ಅವರನ್ನು ಮಂಗಳೂರಿನ ಸೆಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪುತ್ತೂರಿನಲ್ಲಿ ಬಿಜೆಪಿ ನಾಯಕರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಬ್ಯಾನರ್ ಅಳವಡಿಸಲಾಗಿತ್ತು. ಈ ಕುರಿತು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ನಗರ ಠಾಣೆ ಪೊಲೀಸರು ನರಿಮೊಗರಿನ 9 ಮಂದಿ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಅಭಿ ಯಾನೆ ಅವಿನಾಶ್ ಮತ್ತು ಗುರುಪ್ರಸಾದ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಗೆ ಸಂಬಂಧಿಸಿ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ಸಂಪ್ಯ ಠಾಣೆ ಎಸ್‌ಐ ಶ್ರೀನಾಥ್ ರೆಡ್ಡಿ ಮತ್ತು ಸಂಪ್ಯ ಠಾಣೆಯ ಹರ್ಷಿತ್ ವಿರುದ್ಧ ಅವಿನಾಶ್ ತಂದೆ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net