ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಕಾಲಹರಣ, ಮಾಜಿ ಸಿಎಂ ಎಚ್‌ಡಿಕೆ ಆರೋಪ

05 Nela ph 02 HDK
Published on

ನೆಲಮಂಗಲ: ಸಂಪುಟ ವಿಸ್ತರಣೆಯನ್ನೆ ದೊಡ್ಡ ಕೆಲಸವಾಗಿಸಿಕೊಂಡಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದಲ್ಲಿನ ಸಮಸ್ಯೆಗಳ ಪರಿವೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಪಟ್ಟಣದ ಪ್ರವಾಸಿಮಂದಿರ ಬಸ್ ನಿಲ್ದಾಣದ ಬಳಿ ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು. ಕುತಂತ್ರದಿಂದ ಅಧಿಕಾರ ಹಿಡಿದಿರುವ ಬಿಜೆಪಿ ತಾನಾಗೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದೆ. ಇದರಿಂದ ರಾಜ್ಯದ ಅಭಿವೃದ್ಧಿ 5 ವರ್ಷ ಹಿಂದಕ್ಕೆ ಹೋಗಿದೆ. ರಾಜ್ಯದ ಭವಿಷ್ಯ ಏನಾಗುವುದೋ ಎಂಬ ಚಿಂತೆ ಕಾಡತೊಡಗಿದೆ ಎಂದು ಹೇಳಿದರು.

ಹಲವು ವರ್ಷದಿಂದ ಕೆಲ ಇಲಾಖೆಗಳಿಗೆ ಕೊಡುತ್ತಿದ್ದ ಅನುದಾನ ತಡೆಹಿಡಿದಿರುವ ಕೇಂದ್ರ ಸರ್ಕಾರದ ನಿಲುವಿನಿಂದಾಗಿ ರಾಜ್ಯಗಳಲ್ಲಿ ಸಮಸ್ಯೆ ಉಲ್ಬಣಗೊಂಡಿವೆ. ಅನುದಾನ ಬಿಡುಗಡೆಗಾಗಿ 15ನೇ ಹಣಕಾಸು ಆಯೋಗದ ಶಿಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಕೇಂದ್ರದ ಆರ್ಥಿಕ ನೀತಿಗಳು ದೇಶಕ್ಕೆ ಮಾರಕವಾಗುತ್ತಿದೆ. ರಾಜ್ಯ ಸರ್ಕಾರವು ಇದಕ್ಕೆ ಪೂರಕವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಶ್ರೀಲಂಕಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಜೆಡಿಎಸ್ ಮುಖಂಡ ಗೋವೇನಹಳ್ಳಿ ಶಿವಕುಮಾರ್ ಕುಟುಂಬ ಆರಂಭಿಸಿರುವ ಆರೋಗ್ಯ ತಪಾಸಣಾ ಪ್ರಯೋಗಾಲಯ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತಕುಮಾರ್, ಪುರಸಭೆ ಸದಸ್ಯ ಸುನಿಲ್‌ಮೂಡ್, ಎನ್.ಎಸ್.ಪೂರ್ಣಿಮಾ, ಮಾಜಿ ಅಧ್ಯಕ್ಷೆ ಸುಜಾತಾ ಪ್ರಕಾಶ್, ಮುಖಂಡ ಪ್ರಕಾಶ್, ವೈದ್ಯೆ ಹೇಮಶ್ರೀ, ಅಭಿಜಿತ್ ಮತ್ತಿತರರು ಇದ್ದರು.

ಹಳೇ ಮೈಸೂರು, ರಾಮನಗರ, ಚನ್ನಪಟ್ಟಣದ ಜನತೆ ಮತ್ತು ಅಭಿಮಾನಿಗಳು ಜೆಡಿಎಸ್ ಪಕ್ಷಕ್ಕಾಗಿ ಪ್ರಾಣಕೊಡಲು ಸಿದ್ಧರಿದ್ದಾರೆ. ಅಧಿಕಾರ ಬಳಸಿಕೊಂಡು ಜೆಡಿಎಸ್ ಪಕ್ಷವನ್ನು ದುರ್ಬಲ ಮಾಡುತ್ತೇವೆ ಎಂಬ ಪ್ರತಿಪಕ್ಷಗಳ ಕನಸು ಕನಸಾಗಿಯೇ ಉಳಿಯಲಿದೆ. ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net