

ಮಂಡ್ಯ: ಕೆ.ಬಿ.ದೊಡ್ಡಿ ಸಂಪೂರ್ಣ ಕೃಷಿ ವಿದ್ಯಾಸಂಸ್ಥೆ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿಯಲ್ಲಿ ಅ.12ರಂದು ಬೆಳೆ ಕ್ಷೇತ್ರೋತ್ಸವ ಹಾಗೂ ಅ.17ರಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಡೀನ್ ಡಾ.ಬಿ.ಎನ್.ಜ್ಞಾನೇಶ್ ತಿಳಿಸಿದರು.
ಸಂಪೂರ್ಣ ಅಂತಾರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ತಂತ್ರಜ್ಞಾನ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಮ್ಮಿಕೊಳ್ಳಲಾಗಿದೆ. 25 ಜನ ಬಿಎಸ್ಸಿ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ವಾಸ್ತವ್ಯವಿದ್ದು, ಗ್ರಾಮೀಣ ಬದುಕಿನ ಜೀವನ ಶೈಲಿ ಹಾಗೂ ಕೃಷಿ ಪದ್ಧತಿಯ ನೈಜ್ಯತೆ ಅರಿಯಲು ಮುಂದಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ಷೇತ್ರೋತ್ಸವದಲ್ಲಿ 5ನೇ ಬ್ಯಾಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿವಿಧ ಸಿರಿಧಾನ್ಯಗಳು, ಔಷಧ ಬೆಳೆಗಳು, ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ ಇರಲಿದ್ದು, ಈ ಬೆಳೆಗಳ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆಂದು ವಿವರಿಸಿದರು.
ಸಹ ಪ್ರಾಧ್ಯಾಪಕಿ ಡಾ.ಸುಧಾ ಮಾತನಾಡಿ, ವಿಷಮುಕ್ತ ಆಹಾರ ಉತ್ಪಾದನೆಗೆ ಒತ್ತು ನೀಡುವ ಸದುದ್ದೇಶದಿಂದ ತಡಗವಾಡಿ ಗ್ರಾಮದ ರೈತರೊಬ್ಬರ ಅರ್ಧ ಎಕರೆ ಜಮೀನಿನಲ್ಲಿ 9 ಬಗೆಯ ಸಿರಿಧಾನ್ಯ, 7 ಬಗೆಯ ದ್ವಿದಳ ಧಾನ್ಯ, 4 ಬಗೆಯ ಎಣ್ಣೆಕಾಳು, 13 ವಿವಿಧ ತರಕಾರಿಗಳ ಪ್ರಾತ್ಯಕ್ಷಿಕೆ ಜತೆ 17 ಔಷಧ ಸಸ್ಯಗಳ ಮಾಹಿತಿಯನ್ನು ರೈತರು ಹಾಗೂ ಜನಸಾಮಾನ್ಯರಿಗೆ ಕೃಷಿ ವಸ್ತು ಪ್ರದರ್ಶನದಲ್ಲಿ ನೀಡಲಾಗುವುದೆಂದು ವಿವರಿಸಿದರು.
ಹಿರಿಯ ಪ್ರಾಧ್ಯಾಪಕ ಡಾ.ಭೈರೇಗೌಡ ಮಾತನಾಡಿ, ನಮ್ಮ ಕಾಲೇಜಿನ ನೆರೆ-ಹೊರೆ ಗ್ರಾಮಗಳ ರೈತರಿಗೆ ಸಲಹೆ ಸಹಕಾರ ನೀಡಲಾಗುತ್ತಿದೆ. 80 ಎಕರೆ ವಿಶಾಲವಾದ ಜಮೀನಿನಲ್ಲಿ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ತೆಂಗು ಬೆಳೆಗೆ ತಗುಲಿರುವ ನುಸಿಪೀಡೆ ರೋಗ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆ ನೀಡಲಾಗುತ್ತಿದೆ ಎಂದರು.