

ಚನ್ನರಾಯಪಟ್ಟಣ: ಪಟ್ಟಣದ ಸಂತೆಯಲ್ಲಿ ಶನಿವಾರ ಆಹಾರ ಸುರಕ್ಷತಾ ಅಧಿಕಾರಿಗಳು ಬೆಣ್ಣೆ ಮಾರಾಟಗಾರರಿಂದ ಬೆಣ್ಣೆಯ ಮಾದರಿಯನ್ನು ಸಂಗ್ರಹಿಸಿ ಪಟ್ಟಣಕ್ಕೆ ಆಗಮಿಸಿದ್ದ ಆಹಾರ ಸುರಕ್ಷತಾ ಸಂಚಾರಿ ಆಹಾರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದರು.
ಚನ್ನರಾಯಪಟ್ಟಣದಲ್ಲಿ ಕಲಬೆರಕೆ ಬೆಣ್ಣೆ ಮಾರಾಟ ಶೀರ್ಷಿಕೆಯಡಿ ಏ.4ರಂದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧೀನದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳ ತಂಡ ಶನಿವಾರ ಪರೀಕ್ಷೆ ಮಾಡಲು ಆಹಾರ ಸುರಕ್ಷತಾ ಸಂಚಾರಿ ಆಹಾರ ಪ್ರಯೋಗಾಲಯದೊಂದಿಗೆ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ಸಂತೆಯಲ್ಲಿ ದಿಡೀರ್ ದಾಳಿ ನಡೆಸಿ ಬೆಣ್ಣೆ ಮಾರಾಟಗಾರರಿಂದ ಬೆಣ್ಣೆ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು.
ಪ್ರಯೋಗಾಲಯದ ಪರೀಕ್ಷೆಯ ವರದಿ ಬಂದ ನಂತರ ಬೆಣ್ಣೆಯಲ್ಲಿ ಹಾನಿಕಾರಕ ಅಂಶಗಳು, ಕಲಬೆರಕೆ ಪತ್ತೆಯಾದರೆ ಲಾಭ ಮಾಡುವ ಉದ್ದೇಶದಿಂದ ಶುದ್ಧ ಬೆಣ್ಣೆಯನ್ನು ಹದಗೆಡಿಸುತ್ತಿರುವ ನಕಲಿ ಬೆಣ್ಣೆ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ವಿಜಯವಾಣಿ ವರದಿ ಎಚ್ಚರಿಕೆ ಗಂಟೆಯಾಗಿದ್ದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಜನಪ್ರತಿನಿಧಿಗಳು, ಪುರಸಭಾ ಸದಸ್ಯರು, ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರು ವಿಜಯವಾಣಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿ ಡಾ. ಶಶಿಧರ್, ಆಹಾರ ಸುರಕ್ಷತಾ ಅಧಿಕಾರಿಗಳಾದ ಎಂ. ಎನ್.ಶಿವರಾಮು, ಎಂ.ಶರತ್ ಭಾಗವಹಿಸಿದ್ದರು