ಶ್ರೀಭೈತೂರಪ್ಪ ಪೊವ್ವೆದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ಸಂಪನ್ನ

ಶ್ರೀಭೈತೂರಪ್ಪ ಪೊವ್ವೆದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ಸಂಪನ್ನ
Published on

ಸುಂಟಿಕೊಪ್ಪ: ಕೊಡಗರಹಳ್ಳಿಯಲ್ಲಿ ನೆಲೆಸಿರುವ ಶ್ರೀಭೈತೂರಪ್ಪ ಪೊವ್ವೆದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸೋಮವಾರ ಶ್ರದ್ಧಾ ಭಕ್ತಿಯಿಂದ ನೇರವೇರಿತು.

ಸೂರ್ಯೋದಯದ ವೇಳೆಗೆ ಶ್ರೀಗಣಹೋಮದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶ್ರೀ ಬೈತೂರಪ್ಪ ಪೊವ್ವೆದಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ರುದ್ರಾಭೀಷೇಕವನ್ನು ದೇವಾಲಯದ ಪ್ರಧಾನ ಆರ್ಚಕ ನರಸಿಂಹ ಭಟ್, ಚಂದ್ರಶೇಖರ್ ಭಟ್, ರವಿಶಂಕರ್ ಮಂಜುನಾಥ್‌ಭಟ್ ಹಾಗೂ ಕೃಷ್ಣ ಭಟ್ ತಂಡ ನೇರವೇರಿಸಿತು.

ದೇವತಕ್ಕರಾದ ಜಗ್ಗರಂಡ ಹ್ಯಾರಿಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕ ನರಸಿಂಹ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನ, ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಿ ದುಡಿಕೊಟ್ ಪಾಟ್ ಸಾಂಪ್ರಾದಾಯಿಕ ಓಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ನೇರವೇರಿಸಲಾಯಿತು. ಮಾಹಾಪೂಜೆಯ ಬಳಿಕ ತೀರ್ಥ ಪ್ರಸಾದದೊಂದಿಗೆ ಅನ್ನ ಸಂತರ್ಪಣೆ ನೇರವೇರಿತು. ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರಾದಾಯಿಕ ವೇಷ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರಾದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ಹಬ್ಬದ ಕಟ್ಟಿನ ನಂತರದ 11ದಿನ ಬೆಳಗಿನ ಜಾವದ ದೀಪದ ಬೆಳಕಿನಲ್ಲಿ ದೇವರಿಗೆ ಬೊಳಕಾಟ್ ನೃತ್ಯ ಸೇವೆ ಸಾಂಪ್ರಾದಾಯಿಕ ಉಡುಪಿನಲ್ಲಿ ಸಲ್ಲಿಸುವುದು ವಿಶೇಷವಾಗಿದೆ.

ಏ.16 ರಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಏ.18 ರಂದು ದೇವಾಲಯದ ಆವರಣದಲ್ಲಿ ಹಬ್ಬದ ಕಟ್ಟನ್ನು ಹಾಕಲಾಗಿತ್ತು. ಏ.26 ರ ಶುಕ್ರವಾರ ಶ್ರೀಬಸವೇಶ್ವರ ದೇವರ ಎತ್ತು ಪೋರಾಟದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಕೊಡಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಾರ್ಷಿಕ ಹಬ್ಬವನ್ನು ಶ್ರೀಬೈತೂರಪ್ಪ ಪೊವ್ವೆದಿ ಬಸವೇಶ್ವರ ದೇವಾಲಯ ಟ್ರಸ್ಟ್ ಮೇಲುಸ್ತುವಾರಿಯಲ್ಲಿ ದೇವತಕ್ಕರು ಮತ್ತು ಮುಕ್ಕಾಟಿಯವರ ನೇತ್ರತ್ವದಲ್ಲಿ ಗ್ರಾಮಸ್ಥರು ದಾನಿಗಳು ಮತ್ತು ಹಿತೈಷಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net