

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭೂಮಿ, ನೀರು, ಪರಿಸರ, ಭಾಷೆ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ 5 ಮಹತ್ವದ ನಿರ್ಣಯಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಳ್ಳಲಾಯಿತು.
ಸಮ್ಮೇಳನ ವೇದಿಕೆಯಲ್ಲಿನ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ನಿರ್ಣಯ ಮಂಡಿಸಿದರು.
ಕಸಾಪ ಕೇವಲ ಸಾಹಿತ್ಯಿಕ ಚಿಂತನೆಗಳನ್ನು ಮಾತ್ರ ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸದೆ ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಸವಾಲು, ನೆಲದ ಹೋರಾಟಗಳು, ಆತಂಕಗಳ ಬಗ್ಗೆಯೂ ತನ್ನ ಇಚ್ಛಾಶಕ್ತಿಯನ್ನು ಹಲವು ವೇಳೆ ಪ್ರದರ್ಶಿಸಿದೆ. ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗದ ಆಶೋತ್ತರಗಳೂ ಸಾಹಿತ್ಯಿಕ ಚಿಂತನೆಗಳ ಮೂಲ ಆಶಯವೇ ಆಗಿದೆ ಎಂದರು.
ಸಮ್ಮೇಳನದ 5 ನಿರ್ಣಯಗಳು
1. ಅಭಿವೃದ್ಧಿ ಹೆಸರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಇತರ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ. ರೈತರ ಹಿತಾಸಕ್ತಿಯೇ ಪರಮೋಚ್ಚವಾಗಿದ್ದು, ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯಲ್ಲಿ 1 ಸಾವಿರಕ್ಕೂ ಹೆಚ್ಚು ದಿನಗಳಿಂದ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿತು.
2. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಕೊನಘಟ್ಟ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ರಾಸಾಯನಿಕ ತ್ಯಾಜ್ಯ ನೀರನ್ನು ಜೀವಂತ ಕೆರೆಗಳಿಗೆ ಹರಿಸುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಕುರಿತ ಹೋರಾಟವನ್ನು ಸಮ್ಮೇಳನ ಬೆಂಬಲಿಸುತ್ತದೆ. ಈ ಭಾಗದ ಗ್ರಾಮಗಳಿಗೆ 3ನೇ ಹಂತದ ಶುದ್ಧೀಕರಿಸಿದ ನೀರು ಪೂರೈಸುವ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕೂಡಲೇ ಕ್ರಮ ವಹಿಸಲು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿತು.
3. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆ-ಕುಂಟೆಗಳು, ಜಲಮೂಲಗಳು, ಜೀವಿ ವೈವಿಧ್ಯತೆಯನ್ನು ರಕ್ಷಿಸಿ, ಪರಂಪರೆಯ ಅನನ್ಯತೆ ಉಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ದೊಡ್ಡಬಳ್ಳಾಪುರ ಸೇರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಬಿಬಿಎಂಪಿ ಕಸ ಸಂಸ್ಕರಣಾ ನೂತನ ಘಟಕಗಳನ್ನು ತೆರೆಯಬಾರದು.
4. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ನುಡಿ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಬೇಕು. ಕನ್ನಡವನ್ನು ಭವಿಷ್ಯದ ಉದ್ಯೋಗದಾಯಿ ಭಾಷೆಯಾಗಿ ರೂಪಿಸುವ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ, ಆಡಳಿತ, ಕಾನೂನಿನ ಭಾಷೆಯಾಗಿ ರೂಪಿಸಲು ಕ್ರಮ ವಹಿಸಬೇಕು. ಪಾರಿಭಾಷಿಕ ಪದಕೋಶಗಳ ರಚನೆ ಮತ್ತು ಪ್ರಕಟಣೆಗೆ ಸರ್ಕಾರ ಮುಂದಾಗಬೇಕು.
5. ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಕೈಗಾರಿಕಾ ವಸಾಹತುಗಳು, ಕಾರ್ಖಾನೆ, ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು. ಡಿ. ದರ್ಜೆ ಹುದ್ದೆಗಳಿಗೆ ಮಾತ್ರ ಸೀಮಿತವಾಗದೆ, ಉನ್ನತ ಹಂತದ ಹುದ್ದೆಗಳಲ್ಲೂ ಸ್ಥಳೀಯರಿಗೆ ಮೀಸಲಾತಿ ಜಾರಿಗೊಳ್ಳಬೇಕು. ಉದ್ಯೋಗ ಕೌಶಲಗಳ ತರಬೇತಿಗೆ ಕ್ರಮ ವಹಿಸಬೇಕು. ಜ್ಞಾನಾಧಾರಿತವಾಗಿ ಎಲ್ಲ ಭಾಷೆಗಳಿಗೂ ಮನ್ನಣೆ ನೀಡುವ ರಾಜ್ಯದಲ್ಲಿ ಹಿಂದಿ ಸೇರಿದಂತೆ ಯಾವುದೇ ಭಾಷೆಯ ಬಲವಂತದ ಹೇರಿಕೆಯನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ.