ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

dc office new
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ.7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುತ್ತಿದ್ದು ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಈ ಬಗ್ಗೆ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡರು. ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ ಅಗತ್ಯತೆಗಳು ಮತ್ತು ಇತರೆ ಸಾಮಾಜಿಕ ಅಂಶಗಳನ್ನು ದಾಖಲಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರವನ್ನು ಸೃಷ್ಟಿಸುವುದು ಜತೆಗೆ ಈ ದತ್ತಾಂಶ ಸಂಗ್ರಹಣೆ ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಸಮೀಕ್ಷೆ ಸುಮಾರು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಗಣತಿದಾರರು ಮೊಬೈಲ್ ಆಪ್ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಸಮೀಕ್ಷೆಯು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ನಡೆಯಲಿದೆ. ಸಾರ್ವಜನಿಕರು ತಮ್ಮ ಮಾಹಿತಿಯನ್ನು ನಿಖರವಾಗಿ ಒದಗಿಸಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಹೌಸ್ ಲಿಸ್ಟಿಂಗ್: ಸಮೀಕ್ಷೆ ಕಾರ್ಯಕ್ಕೆ ಪೂರ್ವಭಾವಿಯಾಗಿ ಮನೆ ಪಟ್ಟಿ ಅಂದರೆ ಹೌಸ್‌ಲಿಸ್ಟಿಂಗ್ ಎಕ್ಸರ್ಸೈಜ್ ಮಾಡಲಾಗುತ್ತಿದೆ. ಜತೆಗೆ ಆಯೋಗದ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ, ಸ್ಟಿಕ್ಕರ್ ಅಂಟಿಸಲಿದ್ದಾರೆ. ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದ್ದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಹಾಗೂ ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಲಕಾಲಕ್ಕೆ ಸಭೆ ನಡೆಸಿ ಸಮೀಕ್ಷೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ 3.78 ಲಕ್ಷ ಕುಟುಂಬ: ದೇವನಹಳ್ಳಿಯಲ್ಲಿ 67,547 ಕುಟುಂಬ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1,03,903 ಕುಟುಂಬಗಳು. ಹೊಸಕೋಟೆ ತಾಲೂಕಿನಲ್ಲಿ 88,392 ಕುಟುಂಬ ಹಾಗೂ ನೆಲಮಂಗಲ 79,943 ಕುಟುಂಬಗಳಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಂದ 3,34,785 ಕುಟುಂಬಗಳ ಸಮೀಕ್ಷೆ ನಡೆಯಲಿದೆ.

ಸಮೀಕ್ಷೆಗೆ 2520 ಗಣತೀದಾರರ ಬಳಕೆ: ಜಿಲ್ಲೆಯಾದ್ಯಂತ ಸಮೀಕ್ಷೆ ಕೈಗೊಳ್ಳಲು 2520 ಗಣತೀದಾರರನ್ನು ನೇಮಿಸಲಾಗಿದೆ. ಜತೆಗೆ 55 ಮಾಸ್ಟರ್ ಟ್ರೈನರ್‌ಗಳು,194 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಾಸ್ಟರ್ ಟ್ರೈನಿಂಗ್ ಪಡೆದವರು ಗಣತಿದಾರರಿಗೆ ತರಬೇತಿ ನೀಡಲಿದ್ದಾರೆ. ಸಮೀಕ್ಷೆಯಲ್ಲಿ ಗಣತೀದಾರರೊಂದಿಗೆ ಆಶಾ ಕಾರ್ಯಕರ್ತೆಯರ, ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಾಹಿಸಲಿದ್ದಾರೆ.

150 ಮನೆಗಳ ಬ್ಲಾಕ್ ರಚನೆ

ಸಮೀಕ್ಷೆ ಸಲುವಾಗಿ ತಲಾ 150 ಮನೆಗಳನ್ನು ಒಂದು ಬ್ಲಾಕ್ ಆಗಿ ರಚಿಸಲಾಗಿದೆ. ಈ ಬ್ಲಾಕ್‌ಗಳಲ್ಲಿ ಒಬ್ಬ ಗಣತಿದಾರನನ್ನು (ಎನ್ಯೂಮರೇಟರ್) ನಿಯೋಜಿಸಲಾಗುವುದು. ಅವರು ಸಮೀಕ್ಷೆ ಬಗ್ಗೆ ಪ್ರತಿ ಮನೆಗೆ ತೆರಳಿ 60 ಪ್ರಶ್ನೆಗಳನ್ನು ಆ್ಯಪ್ ಮೂಲಕ ಕೇಳುವರು. ಗಣತಿದಾರರ ಮೇಲೆ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಾರೆ.

ಸಹಾಯವಾಣಿ ಸಂಪರ್ಕ

ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ಗೊಂದಲಗಳಿದ್ದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ರಾಜ್ಯ ಸಹಾಯವಾಣಿ ಸಂಖ್ಯೆ 8050770007 ಗೆ ಕರೆ ಮಾಡಬಹುದು.

ಜಿಲ್ಲೆಯ ಪ್ರತಿ ಮನೆಗೆ ಆಯೋಗದ ಸಿಬ್ಬಂದಿ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಿದ ಬಳಿಕ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಗಣತಿದಾರರಿಗೆ ಅಗತ್ಯ ದಾಖಲೆಗಳ ಜತೆಗೆ ಸೂಕ್ತ ಮಾಹಿತಿ ಒದಗಿಸಿ ಸಹಕರಿಸುವ ಮೂಲಕ ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಿಸಬೇಕು ಎಂದು ಕೋರುತ್ತೇನೆ

ಎ.ಬಿ ಬಸವರಾಜು, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net