

ಹಳಿಯಾಳ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾನೂನು ಕಾರ್ಯಾಗಾರ ಉತ್ಸವದಲ್ಲಿ ಆಯೋಜನೆ ಮಾಡಲಾಗಿದ್ದ ವಿವಿಧ ಕಾನೂನು ಸ್ಪರ್ಧೆಗಳಲ್ಲಿ ಪಟ್ಟಣದ ಸಮೀರ್ ಮಹ್ಮದಇಕ್ಬಾಲ್ ಕಾಗದ ಅವರು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿ ನಗದು ಬಹುಮಾನ ಗಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಂ.ಎ. ಕಾಗದ ಅವರ ಪುತ್ರ ಸಮೀರ್ ಅವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಡಿ ಬರುವ ಕಾನೂನು ಕಾಲೇಜ್ನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿರುವ ಎಸ್ಡಿಎಂ ಕಾನೂನು ಕಾಲೇಜ್ನಲ್ಲಿ ಏರ್ಪಾಟಾಗಿದ್ದ ಕಾನೂನು ಸಂಧಾನ, ಕಿರಿಯ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥ ಹಾಗೂ ಕಾನೂನು ಸಮರ, ಅಣಕು ವಾದ, ವಿವಾದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹುಬ್ಬಳ್ಳಿಯ ಕಾನೂನು ಕಾಲೇಜ್ನ ತಂಡದಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ ರನ್ನರ್ ಆಫ್ ಪ್ರಶಸ್ತಿಯೊಂದಿಗೆ ನಗದು 30 ಸಾವಿರ ರೂ. ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜ್ಯದ ಮೈಸೂರು, ಬೆಂಗಳೂರು, ಕಲಬುರಗಿ, ಮಂಗಳೂರು, ಬೆಳಗಾವಿ ಸೇರಿ ಇನ್ನಿತರ ಭಾಗದ ಪ್ರತಿಷ್ಠಿತ ಕಾಲೇಜ್ಗಳ ಕಾನೂನು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಸಮೀರ ಕಾಗದ ಅವರು ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಶಸ್ತಿಯನ್ನು ಸಂಪಾದಿಸಿದ್ದಾರೆ.