

ಬೆಳಗಾವಿ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಶಾಸಕ ಅಭಯ ಪಾಟೀಲ ಮತ್ತು ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಬೆಂಬಲಿಗರ ನಡುವೆ ವಾಗ್ವಾದವಾಗುತ್ತಿವೆ.
ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಪ್ರತಿಮೆಯನ್ನು ಜ.5ರಂದು ಲೋಕಾರ್ಪಣೆ ಮಾಡುವ ಕುರಿತು ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದಕ್ಕೂ ಮೊದಲೇ ಗುರುವಾರ ಬೆಳಗ್ಗೆಯೇ ಪ್ರತಿಮೆ ಅನಾವರಣ ಸ್ಥಳಕ್ಕೆ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ ಸೇರಿ ಮುಂತಾದವರು ಆಗಮಿಸಿದ್ದರು. ಪ್ರತಿಮೆಯ ಸ್ಥಳದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿಮೆ ಉದ್ಘಾಟಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಮೆ ಬಳಿ ಎರಡೂ ಕಡೆ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಪುತ್ಥಳಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆ ದಿನಾಂಕದಂದೇ ಪ್ರತಿಮೆ ಉದ್ಘಾಟಿಸಲಾಗುವುದು. ಈಗ ಪ್ರತಿಮೆ ಕೆಳಭಾಗದಲ್ಲಿರುವ ಸಭಾಭವನದಲ್ಲಿ ಪೂಜೆ ಮಾತ್ರ ನೆರವೇರಿಸುತ್ತಿದ್ದೇವೆ. ಯಾರೂ ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಎಂದು ಮೇಯರ್ ಸವಿತಾ ಕಾಂಬಳೆ ಪ್ರತಿಕ್ರಿಯಿಸಿದ್ದಾರೆ.