

ಮೈಸೂರು: ರಂಗಾಯಣವೂ ವರ್ಷಾಂತ್ಯ ಮತ್ತು ನೂತನ ವರ್ಷಾರಂಭದಲ್ಲಿ ಎರಡು ನಾಟಕ ಪ್ರದರ್ಶನ ಆಯೋಜಿಸಿದೆ. ಡಿ.31 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗ ವೇದಿಕೆಯಲ್ಲಿ ಕಾರ್ತಿಕ್ ಉಪಮನ್ಯು ನಿರ್ದೇಶನದ ‘ಸಾಂಬಶಿವ ಪ್ರಹಸನ’ ನಾಟಕ ಪ್ರದರ್ಶನ ನಡೆಯಲಿದೆ.
ಡಾ. ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವು ರಾಜಕೀಯದ ಸ್ವಾರ್ಥ, ಕುತಂತ್ರಗಳನ್ನು ವಿಡಂಬಿಸಲಾಗಿದೆ. ಅಧಿಕಾರದಲ್ಲಿರುವ ಜನರ ತಮ್ಮ ಅಜ್ಞಾನ ಮತ್ತು ಆಮಿಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ದಿವಾಳಿಗೆ ಹೇಗೆ ಕಾರಣರಾಗುತ್ತಾರೆ ಎಂಬುದು ನಾಟಕದ ಕೇಂದ್ರವಸ್ತುವಾಗಿದೆ.
ಜ.1 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗ ವೇದಿಕೆಯಲ್ಲಿ ಜೀವನ್‌ಕುಮಾರ್ ಬಿ. ಹೆಗ್ಗೋಡು ನಿರ್ದೇಶನದ ಕೆ.ವಿ.ಸುಬ್ಬಣ್ಣ ರಂಗಾನುವಾದದ ‘ಭಗವದಜ್ಜುಕೀಯಂ ಅರ್ಥಾತ್ ಸೂಳೆ ಸನ್ಯಾಸಿ’ ನಾಟಕ ಪ್ರದರ್ಶನ ನಡೆಯಲಿದೆ.
ಸದರಿ ನಾಟಕವು ದಶರೂಪಕಗಳಲ್ಲಿ ಒಂದಾಗಿದ್ದು, ಮುಖ್ಯವಾಗಿ ವಿಡಂಬನಾತ್ಮಕ ಹಾಸ್ಯದ ಮೂಲಕ ರಸಿಕರನ್ನು ರಂಜಿಸುವುದಲ್ಲದೆ, ರಚಿಸಲ್ಪಟ್ಟ ಕಾಲಮಾನದಲ್ಲಿ ಪ್ರಚಲಿತದಲ್ಲಿದ್ದ ಸಾಮಾಜಿಕ ಒಳನೋಟವನ್ನು ಹಾಗೂ ಅಂದಿನ ಆಚಾರ ನಂಬಿಕೆಗಳು ಕ್ರಮಬದ್ಧ ಶಿಷ್ಟಾಚಾರಗಳಿಂದ ಸಂಯೋಜಿತವಾಗಿರುತ್ತದೆ. ಆದರೆ ಪ್ರಸ್ತುತ ನಾಟಕವು ವರ್ತಮಾನದ ಭಾರತೀಯ ಸಂಸ್ಕೃತಿಯ ನಂಬಿಕೆಯ ಆಚರಣೆಗಳು ಮೂಲದಲ್ಲಿರುವ ಜ್ಞಾನ ಪರಂಪರೆಯನ್ನು ದರ್ಶಿಸುತ್ತದೆ.