ಸಂಬಾರ ಬೆಳೆ ಉತ್ಪಾದನೆ: ರಾಜ್ಯ ಮುಂಚೂಣಿ

24adarshkdga6
Published on

ಮಡಿಕೇರಿ: ಕರ್ನಾಟಕ ರಾಜ್ಯವು ಭಾರತದಲ್ಲಿಯೇ ಸಂಬಾರ ಬೆಳೆಗಳಿಗೆ ಅತ್ಯುತ್ತಮ ಮಾರುಕಟ್ಟೆಯಾಗಿದ್ದು, ಸಾಂಬಾರ ಬೆಳೆಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ೬ನೇ ಸ್ಥಾನ ಪಡೆದಿದೆ ಎಂದು ಭಾರತೀಯ ಸಾಂಬಾರ ಮಂಡಳಿಯ ಉಪ ನಿರ್ದೇಶಕ ಡಾ.ಜಾನ್ಸಿ ಮಣಿತೋಟಂ ಹೇಳಿದರು.


ನಗರದ ಹೋಟೆಲ್ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಬಾರ ಮಂಡಳಿಯಿಂದ ಆಯೋಜಿತ ಸಾಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಏಲಕ್ಕಿ, ಕರಿಮೆಣಸು, ಅರಿಸಿಣ, ಲವಂಗ, ಶುಂಠಿ ಸೇರಿದಂತೆ ೫೦ ವೈವಿಧ್ಯಮಯ ಸಾಂಬಾರ ಪದಾರ್ಥಗಳನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ವಿಶ್ವದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಸಂಬಾರ ಬೆಳೆಗಳಿಗೆ ಕನ್ನಡನಾಡು ಹೆಸರಾಗಿದೆ. ಸುಮಾರು ೩.೭೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಂಬಾರ ಬೆಳೆ ಬೆಳೆಸಲಾಗುತ್ತಿದ್ದು, ೭.೯ ಲಕ್ಷ ಮೆಟ್ರಿಕ್ ಟನ್ ಸಂಬಾರ ಪದಾರ್ಥ ಉತ್ಪಾದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಕೇಂದ್ರ ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಬಾರ ಮಂಡಳಿಯು ಸಾಂಬಾರ ಪದಾರ್ಥಗಳ ರಫ್ತಿಗೆ ಆದ್ಯತೆ ನೀಡಿದ್ದು, ಮಾರಾಟಗಾರರ ಮತ್ತು ಖರೀದಿದಾರರ ನಡುವೆ ಸಮನ್ವಯತೆ ಸಾಧಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.


ಕೊಡಗು ಕಾಫಿ ಸೊಸೈಟಿಯ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಏಲಕ್ಕಿ ಬಿಟ್ಟು ಬೇರೆ ಬೆಳೆಗಳನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಆದರೆ ಜಿಲ್ಲೆಯ ಗಡಿಭಾಗವಾದ ಕರಿಕೆಯಲ್ಲಿ ಸ್ವಲ್ಪಮಟ್ಟಿಗೆ ಏಲಕ್ಕಿಯನ್ನು ಬೆಳೆಯಲಾಗುತ್ತದೆ. ಏಲಕ್ಕಿ ಬೆಳೆಗೆ ಕಟ್ಟೆ ರೋಗದಿಂದಾಗಿ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ರೋಗಕ್ಕೆ ಔಷಧಿಯನ್ನು ಕಂಡುಹಿಡಿದು ರೈತರಿಗೆ ಏಲಕ್ಕಿ ಬೆಳೆಯಲು ಪ್ರೇರೇಪಿಸಬೇಕಿದೆ. ರೈತರಿಗೆ ಸಾಂಬಾರ ಪದಾರ್ಥಗಳನ್ನು ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ಸಾಂಬಾರ ಮಂಡಳಿ ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳಿದ್ದು, ರೈತರಿಗೆ ಒಳ್ಳೆಯ ಮಾರುಕಟ್ಟೆ ಸಿಗಬೇಕು. ಆಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಲಾಭ ದೊರೆತಂತಾಗುತ್ತದೆ. ಜಿಲ್ಲೆಯಲ್ಲಿ ಸಾಂಬಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಾಳು ಮೆಣಸು, ಏಲಕ್ಕಿ, ಶುಂಠಿ ಬೆಳೆಗಳ ಜತೆಗೆ ಕಾಫಿ, ಕಿತ್ತಳೆ ಹೀಗೆ ಹಲವು ಬೆಳೆ ಬೆಳೆಯಲಾಗುತ್ತದೆ. ಸಾಂಬಾರ ಮಂಡಳಿ, ರೈತರಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು ಎಂದರು.


ರಾಜ್ಯದ ವಿವಿಧೆಡೆಗಳಿಂದ ೧೫೦ ಕ್ಕೂ ಅಧಿಕ ಖರೀದಿದಾರರು ಮತ್ತು ಮಾರಾಟಗಾರರು ೧ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸಾಂಬಾರ ಪದಾರ್ಥಗಳ ಭವಿಷ್ಯದ ಕುರಿತು ಚರ್ಚಿಸಿದರು.


ಸಾಂಬಾರ ಮಂಡಳಿಯ ಸದಸ್ಯ ಕೆ.ಎಸ್.ಸತ್ಯನಾರಾಯಣ್, ಹುಬ್ಬಳಿಯ ಕೆಎಸ್‌ಎಸ್‌ಡಿಬಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್, ಬಸಾನಿ ಆಗ್ರೋ ಇನ್ನೋವೇಷನ್ ಪ್ರೈ.ಲಿ.ರಫ್ತುದಾರ ಡಾ.ಸ್ವರೂಪ ರೆಡ್ಡಿ, ಮಡಿಕೇರಿ ಸಾಂಬಾರ ಮಂಡಳಿಯ ಸಹಾಯಕ ನಿರ್ದೇಶಕ ಬಿಜು ಎಸ್.ಎಸ್., ಸಂಬಾರ ಮಂಡಳಿಯ ಹಿರಿಯ ಕ್ಷೇತ್ರ ಅಧಿಕಾರಿ ಎಸ್.ಕುಮಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net