ಸಮರ್ಥ ರಾಮದಾಸರ ಕೊಡುಗೆ ಸ್ಮರಣೀಯ

19 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಿಂದೂ ಸಾಮ್ರಾಜ್ಯದ ಪುನರುತ್ಥಾನಕ್ಕೆ ಹಾಗೂ ಭಕ್ತಿ ಪರಂಪರೆ ಉಳಿಸುವಲ್ಲಿ ಸಮರ್ಥ ರಾಮದಾಸರ ಕೊಡುಗೆ ಅನನ್ಯವಾದುದು ಎಂದು ಹಿರಿಯ ಚಿಂತಕ ಡಾ. ಕೃಷ್ಣ ಕಟ್ಟಿ ಹೇಳಿದರು.

ನಗರದ ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ "ವಿದ್ಯಾವಾರಿಧಿ ಶ್ರೀ ಸಮರ್ಥ ರಾಮದಾಸರು' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮರ್ಥ ರಾಮದಾಸರು ಒಬ್ಬ ಸಂತರಷ್ಟೇ ಅಲ್ಲ. ಅವರೊಬ್ಬ ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ, ಹಿಂದೂ ಸಾಮ್ರಾಜ್ಯಕ್ಕೆ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್​ ಕ್ರಾಂತಿಕಾರಿ. ನಾಡಿನ ಅಭ್ಯುದಯಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಿಕೊಳ್ಳಬೇಕು. ಇಸ್ಲಾಂ ಹಾಗೂ ಕ್ರಿಶ್ಚಿಯನ್​ ದಾಳಿಗೆ ಪ್ರತಿಯಾಗಿ ದಾಳಿ ಮಾಡುವುದರ ಅಗತ್ಯವನ್ನು ಪ್ರತಿಪಾದಿಸಿದರು. ಹಿಂದೂಗಳು ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಮನವರಿಕೆ ಮಾಡಿಕೊಟ್ಟರು. ರಾಮದಾಸಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ರಾಮದಾಸರು, ವೃತ್ತಿ ಶಿಕ್ಷಣಕ್ಕೆ, ಕೌಶಲ ವೃದ್ಧಿಗೆ ಆದ್ಯತೆ ನೀಡಿ ಹೊಸ ಚಿಂತನಾ ಕ್ರಮ ಆರಂಭಿಸಿದರು ಎಂದರು.

ಕೃತಿಕಾರ ಡಾ. ವಾಮನ್​ ಗೋಗಟೆ ಮಾತನಾಡಿ, ರಾಮದಾಸರ ಜೀವನ ಕುರಿತು ಈವರೆಗೆ 60 ಜನರು ಸಂಶೋಧನೆ ಮಾಡಿದ್ದಾರೆ. ಸಮರ್ಥ ರಾಮದಾಸರ ನುಡಿಗಳು ಇಂದಿಗೂ ಪ್ರಸ್ತುತ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯ ವಿಶೇಷತೆಯನ್ನು ಅವರು ಮನವರಿಕೆ ಮಾಡಿಕೊಡುತ್ತಾರೆ ಎಂದರು.

ಕೆ.ಎಸ್​. ಸುಶೀಲಾ ಮಾತನಾಡಿದರು. ರಶ್ಮಿ ಶಿರಹಟ್ಟಿ, ಹರ್ಷ ಡಂಬಳ, ಸಮೀರ ಜೋಶಿ, ಇತರರು ಇದ್ದರು. ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net