

ಹುಬ್ಬಳ್ಳಿ: ಶಿಕ್ಷಕರಾಗಲಿ, ವಿದ್ಯಾರ್ಥಿಗಳಾಗಲಿ ಸದಾ ಕಾರ್ಯ ಚಟುವಟಿಕೆಯಲ್ಲಿರಬೇಕು, ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಶ್ರಮ ವಹಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕೆಂದು ನಿವೃತ್ತ ಬಿಇಒ ಆರ್.ಸಿ. ಹಲಗತ್ತಿ ಹೇಳಿದರು.
ಇಲ್ಲಿಯ ಸಮರ್ಥ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮರ್ಥೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪ್ರತಿ ನಿಮಿಷವು ಮಹತ್ವದ್ದಾಗಿರುತ್ತವೆ. ಕಲಾಂ ಅವರು ಬಾಲ್ಯದಿಂದ ಸಾಕಷ್ಟು ಶ್ರಮ ವಹಿಸಿದರು, ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಆದರ್ಶ ವ್ಯಕ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಿದರು. ಅಂತಹ ಮಾದರಿ ಬದುಕು ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಥ ಗ್ರುಪ್ ಆಫ್ ಕಾಲೇಜಿನ ಚೇರ್ಮನ್ ಅಖಿಲಕುಮಾರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿರಬೇಕು. ಆಗಲೇ ಯಶಸ್ಸಿನ ಬಳಿ ಹೋಗಿ ಸಾಧಿಸಲು ಸಾಧ್ಯ ಎಂದರು.
ಕಾಲೇಜಿನ ಖಜಾಂಚಿ ಸುಮಿತ್ ಭಟ್ ಅವರು, ವಿದ್ಯಾರ್ಥಿಗಳ ಸಾಧನೆಗೆ ಸತತ ಪ್ರಯತ್ನವೇ ಒಂದು ಬಲವಾದ ಅಸ್ತ್ರ ಎಂದು ತಿಳಿಸಿದರು.
ಸಮರ್ಥ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ದೇಸಾಯಿ ಅವರು, ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಿದರು.
ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥರು, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು.