ಸಮರ್ಪಕವಾಗಿ ರಾಗಿ ಖರೀದಿಸುತ್ತಿಲ್ಲ ಎಂದು ರಾಗಿ ಕೇಂದ್ರಕ್ಕೆ ರೈತರಿಂದ ಬೀಗ

10 RMN-MGD p1
Published on

ಮಾಗಡಿ: ಸಮರ್ಪಕವಾಗಿ ರಾಗಿ ಖರೀದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದ ಎನ್‌ಇಎಸ್ ಬಡಾವಣೆ ಬಳಿಯಿರುವ ರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಬೀಗ ಜಡಿದು ಪ್ರತಿಭಟಿಸಿದರು.

ಹೊಸಪಾಳ್ಯ ಲೋಕೇಶ್ ಮಾತನಾಡಿ, ಒಂದು ಎಕರೆಗೆ 15 ಕ್ವಿಂಟಾಲ್ ರಾಗಿ ಖರೀದಿಸುತ್ತೇವೆ ಎಂದು ಹೇಳಿ ಈಗ 10 ಕ್ವಿಂಟಾಲ್ ಖರೀದಿಸುತ್ತಿದ್ದಾರೆ. ರಾಗಿ, ತೆಂಗು ಇತರ ಬೆಳೆಗಳು ಪಹಣಿಯಲ್ಲಿ ನಮೂದಾಗಿದ್ದರು ಸಹ ರೈತರಿಂದ ರಾಗಿ ಖರೀದಿಸುವುದಾಗಿ ಕೃಷಿ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ತಿಂಗಳ ಹಿಂದೆ ಭರವಸೆ ನೀಡಿದ್ದರೂ ರಾಗಿ ಖರೀದಿಸಲು ಕ್ರಮ ಕೈಗೊಂಡಿಲ್ಲ. ಪ್ರತಿದಿನ ನೂರಾರು ರೈತರು ಮಿಕ್ಕ ಕೆಲಸ ಬಿಟ್ಟು ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ಅಲೆಯುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಬಳಿ ಮಾತನಾಡಿ ಎಂದು ಹೇಳುವ ಅಧಿಕಾರಿಗಳು ರೈತರನ್ನು ಯಾಮಾರಿಸುತ್ತಿದ್ದಾರೆ ಎಂದು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.

ಫೆ. 30ರ ಒಳಗೆ ರಾಗಿ ಖರೀದಿ ಮಾಡಲು ರೈತರಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯನ್ನು ಇನ್ನೆರಡು ತಿಂಗಳು ವಿಸ್ತರಿಸುವಂತೆ ಲೋಕೇಶ್ ಒತ್ತಾಯಿಸಿದರು. ಆಹಾರ ಇಲಾಖೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಆಹಾರ ಇಲಾಖೆ ನಿರೀಕ್ಷಕ ಶ್ರೀಧರ್ ಅವರು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ, ಈ ಸಂಬಂಧ ತಹಸೀಲ್ದಾರ್ ಜತೆ ಸಭೆ ನಡೆಸಿ ಮೂರು ದಿನದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ರೈತ ಸಂಘದ ಮುಖಂಡರಾದ ಮಧುಗೌಡ, ರಂಗಸ್ವಾಮಯ್ಯ, ಮಂಜುನಾಥ್, ಟೈಲ್ಸ್ ನಾರಾಯಣಪ್ಪ, ಜಯಣ್ಣ, ರಂಗಪ್ಪ, ಧನಂಜಯ, ಹನುಂತಯ್ಯ, ಹನುಮಂತರಾಯಪ್ಪ, ಗಿರೀಶ್, ಯೋಗೇಶ್ ಇತರರು ಇದ್ದರು.

ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿ: ಕಳೆದ ವರ್ಷ 15 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶವಿತ್ತು. ಈ ವರ್ಷ ಸರ್ಕಾರದ ಆದೇಶದಂತೆ ಒಬ್ಬ ರೈತನಿಂದ 1 ಎಕರೆಗೆ 10 ಕ್ವಿಂಟಾಲ್‌ನಂತೆ 50 ಕ್ವಿಂಟಾಲ್‌ವರೆಗೂ ಖರೀದಿಸಲು ಅವಕಾಶವಿದೆ. 15 ಕ್ವಿಂಟಾಲ್ ಖರೀದಿಸುವಂತೆ ಬೇಡಿಕೆ ಇದ್ದು, ಆಹಾರ ಇಲಾಖೆ ಉಪ ನಿರ್ದೇಶಕ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ವಾರದೊಳಗೆ ಸಭೆ ಕರೆಯಲಾಗುವುದು. ರೈತರು ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಬಗ್ಗೆ ಚರ್ಚಿಸಬಹುದು ಎಂದು ಆಹಾರ ನೀರಿಕ್ಷಕ ಶ್ರೀಧರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net