ಜ.29ರಂದು ಸಾಮರಸ್ಯ ಸಹಬಾಳ್ವೆ ಸಂಗಮ: ವೇದಿಕೆಯ ಮುಖ್ಯಸ್ಥ ಗುರುಪ್ರಸಾದ್ ಕೆರಗೋಡು ಮಾಹಿತಿ

Tulasi-2
Published on

ಮಂಡ್ಯ: ಗಣರಾಜ್ಯೋತ್ಸವ ಮತ್ತು ಗಾಂಧಿ ನೆನಪಿನಲ್ಲಿ ಜ.29ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಶ್ರೀರಂಗಪಟ್ಟದ ಶ್ರೀರಂಗನಾಥ ದೇವಸ್ಥಾನದ ಮೈದಾನದಲ್ಲಿ ‘ಸಾಮರಸ್ಯ ಸಹಬಾಳ್ವೆ ಸಂಗಮ’ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಮುಖ್ಯಸ್ಥ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ಗಾಂಧಿವಾದಿ ಡಾ.ಸುಜಯ್‌ಕುಮಾರ್, ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ಶಶಿಕಾಂತ್ ಸೇಂಥಿಲ್, ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಶಾಂತಿ ಪ್ರಕಾಶನದ ಮುಖ್ಯಸ್ಥ ಮಹಮದ್ ಕುಂಞ, ಸಮಾನ ಮನಸ್ಕರ ವೇದಿಕೆಯ ಪ್ರೊ.ಹುಲ್ಕೆರೆ ಮಹದೇವು ಹಾಗೂ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜಕಾರಣಿಗಳು ಈ ದೇಶದ ಸಂವಿಧಾನವನ್ನು ಗಟ್ಟಿಗೊಳಿಸುವ ಬದಲು ದುರ್ಬಲಗೊಳಿಸುತ್ತಾ ಬಂದಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಜಾತಿ, ಧರ್ಮ, ಭಾಷೆಗಳ ನಡುವೆ ಇದ್ದ ಭಿನ್ನತೆ, ಭಿನ್ನಾಭಿಪ್ರಾಯಗಳಾಗಿ ಬೆಳೆಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾ ಬಂದರು. ಈಗ ಈ ಸ್ವಾರ್ಥ ರಾಜಕಾರಣ ಬೆಳೆದುಬಿಟ್ಟಿದೆ. ಧರ್ಮ, ಮಂದಿರ, ಮಸೀದಿ, ಮಾಲೆಯ ಹೆಸರಿನಲ್ಲಿ ಒಡೆದಾಳುವುದನ್ನೇ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಸೂತ್ರ ಮಾಡಿಕೊಂಡು ಬಿಟ್ಟಿವೆ ಎಂದರು.

ವೇದಿಕೆಯ ಮುಖಂಡರಾದ ಲಕ್ಷ್ಮಣ್ ಚೀರನಹಳ್ಳಿ, ಎಂ.ಪುಟ್ಟಮಾದು, ಮುಖ್ತಿಯಾರ್ ಅಹಮದ್, ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ಷಣ್ಮುಖೇಗೌಡ, ಶಿಲ್ಪಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net