

ಮದ್ದೂರು : ಸಮಾಜದಲ್ಲಿ ಜಾತಿ ತಾರತಮ್ಯ ಇನ್ನೂ ಜೀವಂತವಾಗಿರುವುದು ಕಳವಳಕಾರಿ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮೀಣ ದಲಿತರ ಬದುಕಿನ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ಹಲವು ಯೋಜನೆಗಳ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಅದು ಸದ್ವಿನಿಯೋಗ ಆಗಬೇಕು. ಆ ನಿಧಿಯು ಬಡವರಿಗೆ ಮನೆ, ಶಿಕ್ಷಣ, ಸ್ವ ಉದ್ಯೋಗ ನಿರ್ವಹಣೆಗೆ ಬಳಕೆಯಾಗಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಹಿಂದುಳಿದವರಿಗೆ ಉನ್ನತ ಶಿಕ್ಷಣ ದೊರಕಬೇಕು. ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಎಷ್ಟೋ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವೇ ಇಲ್ಲದ ಸ್ಥಿತಿ ಇದೆ. ಇದು ಆತಂಕಕಾರಿ ಎಂದರು.
ನಂತರ ತಾಲೂಕಿನ ಯರಗನಹಳ್ಳಿ, ಬಸವನಪುರ, ಮಲ್ಲಯ್ಯ ನಗರ, ಗೆಜ್ಜಲಗೆರೆ ಕಾಲನಿ ಗಳಲ್ಲಿ ಸಮಾಲೋಚನೆ ಸಭೆಗಳನ್ನು ನಡೆಸಲಾಯಿತು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಅಂಭೂಜಿ, ಉಪಾಧ್ಯಕ್ಷರಾದ ಕೆ.ಎಸ್.ಶಿವಲಿಂಗಯ್ಯ, ಧನಂಜಯ ಹಾಗೂ ಗಿರಿಜಮ್ಮ ಇದ್ದರು.