

ನೆಲಮಂಗಲ: ಜೀವನದುದ್ದಕ್ಕೂ ವಿವಿಧ ಪಾತ್ರ ಯಶಸ್ವಿಯಾಗಿ ನಿಭಾಯಿಸುವ ಮಹಿಳೆಯರು ಸಮಾಜದ ಏಳಿಗೆಗೆ ಅಪ್ರತಿಮವಾದ ಕೊಡುಗೆ ನೀಡಿದ್ದಾರೆ ಎಂದು ರೋಟರಿ ಮಾಜಿ ಅಧ್ಯಕ್ಷ ಮುನರಾಜಯ್ಯ ತಿಳಿಸಿದರು.
ತಾಲೂಕಿನ ಕೆಂಪಲಿಂಗಹಳ್ಳಿ ವಿವಿಎಸ್ ಕನ್ವೇಷನ್ ಹಾಲ್‌ನಲ್ಲಿ ರೋಟರಿ ಸಂಸ್ಥೆ ಹಾಗೂ ರೋಟರಿ ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಆಧುನಿಕತೆಯ ದಿನಗಳಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವ ಮಹಿಳೆಯರು ರಾಜ್ಯದಿಂದ, ಅಂತಾರಾಷ್ಟ್ರೀಯ ಮಟ್ಟದವರೆಗೆ ಸಾಧನೆ ಮಾಡಿದ್ದಾರೆ. ಮಹಿಳಾ ಶಕ್ತಿಯನ್ನು ಮನಗಂಡಿರುವ ಸರ್ಕಾರಗಳು ವಿಶೇಷ ಯೋಜನೆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಮುಂದಾಗಿವೆ. ಆದ್ದರಿಂದ ಸ್ತ್ರೀ, ಪುರುಷರ ನಡುವಿನ ತಾರತಮ್ಯ ಹೋಗಲಾಡಿಸಿ ಸಮಾನತೆ ತರಬೇಕಿದೆ ಎಂದರು.
ಮಹಿಳೆಯರನ್ನು ಗೌರವಿಸುವುದನ್ನು ಕುಟುಂಬದಿಂದಲೇ ಕಲಿಸಬೇಕಿದೆ. ಸಮಾಜ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಾಧನೆ ಮಾಡಿರುವ ಸಾಧಕಿಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆ ಆಶಯ ಈಡೇರಿದಂತಾಗಿದೆ ಎಂದರು.
ರೋಟರಿ ಇನ್ನರ್‌ವೀಲ್ ಅಧ್ಯಕ್ಷೆ ಶಾರದಾಸುಂದರೇಶ್ ಮಾತನಾಡಿ, ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯಗಳಿಂದ ಸುಸಂಸ್ಕೃತ ದೇಶ ತಲೆ ತಗ್ಗಿಸುವಂತಾಗಿದೆ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.
ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಿ.ಜಿ.ರೇಖಾ, ಮಾದನಾಯನಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ದೇವಿಕಾದೇವಿ, ವಲಯಾರಣ್ಯಾಧಿಕಾರಿ ಎಲ್.ಸ್ವಾತಿ, ಬಿಜಿಎಸ್ ವೈದ್ಯಾಕೀಯ ಕಾಲೇಜು ಉಪನ್ಯಾಸಕಿ ಡಾ.ದೀಪ್ತಿ, ರಂಗಕಲಾವಿದೆ ಜಯಲಕ್ಷ್ಮೀ, ಪೌರಕಾರ್ಮಿಕ ಮಂಜುಳಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಕೆ.ಮಂಜುನಾಥ್, ಕಾರ್ಯದರ್ಶಿ ಎಂ.ಟಿ.ನವೀನ್‌ಕುಮಾರ್, ನಿರ್ದೇಶಕರಾದ ಎಸ್.ಗಂಗರಾಜು, ರಾಜಶೇಖರ್, ಎಲ್.ಕುಮಾರ್, ಸೋಮಶೇಖರ್, ವನರಾಜು, ಮಾಜಿ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್, ಟಿ.ನಾಗರಾಜು, ಸಿ.ಜಿ.ಮಂಜುನಾಥ್, ಇನ್ನರ್‌ವೀಲ್ ಅಧ್ಯಕ್ಷೆ ಶಾರದಾಸುಂದರೇಶ್, ಕಾರ್ಯದರ್ಶಿ ಕೋಮಲಾ, ಖಜಾಂಚಿ ಮಂಜುಳಾಸಿದ್ದರಾಜು, ನಿರ್ದೇಶಕಿ ತೇಜಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.