

ದಾಬಸ್‌ಪೇಟೆ: ಶಾಲಾ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯತ್ತ ಆಸಕ್ತಿ ಬೆಳೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಧರಿತ್ರಿ ಟ್ರಸ್ಟ್ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೇರಿ ಅಭಿಪ್ರಾಯಪಟ್ಟರು.
ಸೋಂಪುರ ಹೋಬಳಿಯ ನರಸೀಪುರದ ಧರಿತ್ರಿ ವಿಶೇಷ ಚೇತನ ಶಾಲೆ ಸಭಾಂಗಣದಲ್ಲಿ ಶೇಷಾದ್ರಿಪುರಂ ವಾಣಿಜ್ಯ ಕಾಲೇಜಿನಿಂದ ಸೋಮವಾರ ಏರ್ಪಡಿಸಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಸುಭದ್ರತೆಗೆ ವಿದ್ಯಾರ್ಥಿಗಳ ಜೀವನದ ದಾರಿ ಉತ್ತಮವಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಸೇವೆಗೆ ಮನಸ್ಸು ಮೂಡಿದರೆ ಬದುಕಿನ ಪಯಣದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ, ಸಮಾಜ ನಮಗೆ ಎಲ್ಲವನ್ನೂ ನೀಡಿದೆ. ಆದರೆ ನಾವು ನೀಡಿರುವುದು ಶೂನ್ಯ. ಆ ಜಾಗ ತುಂಬಿಸುವ ಕೆಲಸವನ್ನು ಯುವ ಸಮುದಾಯ ಮಾಡಬೇಕು ಎಂದರು.
ಸದೃಢ ದೇಹವನ್ನು ವರವಾಗಿ ಪಡೆದಿರುವ ಜನರು ವಿಕಲಾಂಗ ಮಕ್ಕಳಿಂದ ಸ್ಫೂರ್ತಿಯಾಗುವ ಕಾಲಬಂದಿದೆ. ಧರಿತ್ರಿಯಲ್ಲಿನ ಅಂಗವಿಕಲ ಮಕ್ಕಳು ಸ್ವಾರ್ಥವಿಲ್ಲದ ಬದುಕು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಶೇಷಾದ್ರಿಪುರಂ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಸಿ. ಸುಮತಿ ಮಾತನಾಡಿ, ಅಂಗವಿಕಲ ಮಕ್ಕಳ ನಡುವೆ ರಾಷ್ಟ್ರೀಯ ಸೇವಾಯೋಜನೆ ಶಿಬಿರ ರೂಪಿಸಿರುವುದು ಸಂತಸದ ವಿಚಾರ. ಶಾರೀರಿಕವಾಗಿ ಸದೃಢವಾಗಿರುವ ನಾವು ಅಂಗವಿಕಲ ಮಕ್ಕಳ ಕಷ್ಟದ ಜೀವನ ಕಂಡು ನಮಗೂ ಬದುಕುವ ಚಲ ಹೆಚ್ಚಾಗುವ ಜತೆ ಸೇವಾ ಮನೋಭಾವ ಮೂಡಬೇಕಿದೆ ಎಂದರು.
ಧರಿತ್ರಿ ವಿಶೇಷ ಚೇತನ ಶಾಲೆ ಆವರಣದಲ್ಲಿ ಶೇಷಾದ್ರಿಪುರಂ ವಾಣಿಜ್ಯ ಕಾಲೇಜಿನ 50 ವಿದ್ಯಾರ್ಥಿಗಳು ವಾರಗಳ ಕಾಲ ಶಿಬಿರ ಭಾಗವಹಿಸಲಿದ್ದು, ಅಂಗವಿಕಲ ಮಕ್ಕಳ ಒಡನಾಟದಲ್ಲಿ ಸೇವೆ ಜತೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಿಕ್ಷಣ ಕಲಿಸಲಾಗುತ್ತದೆ ಎಂದು ಎನ್‌ಎಸ್‌ಎಸ್ ಶಿಬಿರದ ಕಾರ್ಯಕ್ರಮಾಧಿಕಾರಿ ಮಹೇಶ್ ಬಿ. ತಿಳಿಸಿದರು.
ನರಸೀಪುರ ಅಂಗವಿಕಲರ ಶಾಲೆ ಮುಖ್ಯಶಿಕ್ಷಕ ಎಸ್. ರಂಗನಾಥ್, ಮುಖಂಡ ಎನ್. ಚಂದ್ರಹಾಸ್‌ಗೌಡ, ಎನ್‌ಎಸ್‌ಎಸ್ ಸಹಕಾರ್ಯಕ್ರಮಾಧಿಕಾರಿ ಆರ್.ಮೋಹನ್‌ಕುಮಾರ್, ಪ್ರಾಧ್ಯಾಪಕಿ ಭಾನುಮತಿ ಇದ್ದರು.