ಅಧ್ಯಾತ್ಮ ಲೋಕಕ್ಕೆ ಸಾಮಗರ ಕೊಡುಗೆ ಅಪಾರ...

Saama Lead
Published on

ಪೇಜಾವರ ವಿಶ್ವಪ್ರಸನ್ನ ಶ್ರೀ ಆಶೀರ್ವಚನ

ಸಾಮಗಾನ ಕಲಾಕೇಂದ್ರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಧ್ಯಾತ್ಮ ಮತ್ತು ಕಲಾ ಲೋಕಕ್ಕೆ ದೊಡ್ಡ ಸಾಮಗರ ಕೊಡುಗೆ ಅಪಾರ. ಇದೀಗ ಅವರ ಮಾರ್ಗವನ್ನು ಮೊಮ್ಮಕ್ಕಳು, ಜನಾರ್ದನ ಅಡಿಗರು, ಇನ್ನಿತರ ಹಿರಿಯರೆಲ್ಲ ಸೇರಿ ಮುನ್ನಡೆಸಿಕೊಂಡು ಹೋಗುತ್ತಿರುವುದು ತುಂಬ ಶ್ಲಾಘನೀಯ ಸಂಗತಿ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

Saama 2
ಸ್ವಾತಂತ್ರ್ಯ ಹೋರಾಟಗಾರ, ಹರಿಕಥಾ ವಿದ್ವಾಂಸ, ತಾಳಮದ್ದಲೆ ಮತ್ತು ಯಕ್ಷಗಾನ ಕಲಾವಿದರಾಗಿದ್ದ ಕೀರ್ತಿಶೇಷ ಶಂಕರನಾರಾಯಣ ಸಾಮಗ (ದೊಡ್ಡ ಸಾಮಗ) ಮತ್ತು ಕಮಲಾಕ್ಷಿ ದಂಪತಿ ಸ್ಮರಣಾರ್ಥ ಕೊಡವೂರಿನ ಲಕ್ಷ್ಮೀನಗರದಲ್ಲಿ ನಿರ್ಮಿಸಿದ ಅಧ್ಯಾತ್ಮ ಮತ್ತು ಕಲಾಕೇಂದ್ರ ಸಾಮಗಾನವನ್ನು ಮೇ 30ರಂದು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಾಮಗಾನದ ಎಲ್ಲ ಯೋಜನೆಗಳೂ ಯಶಸ್ವಿಯಾಗಲಿ ಎಂದು ಹಾರೈಸಿದರು.

ವೇದಮೂರ್ತಿ ಮುರಳಿ ಉಪಾಧ್ಯಾಯ, ಅಲ್ವಿನ್​ ದಾಂತಿ, ವಿಜಯ ಕೊಡವೂರು, ಕೆ.ವಾರಿಜಾ ರಾವ್​ ಇತರರು ಮಾತನಾಡಿ, ದೊಡ್ಡ ಸಾಮಗರ ಪಾಂಡಿತ್ಯ, ಯಕ್ಷಗಾನ ಸೇವೆ, ಗಾಂಧಿ ತತ್ವ, ಕೃಷಿ ಹಾಗೂ ಧಾರ್ಮಿಕ ಚಿಂತನೆಯ ಅನುಭವಗಳನ್ನು ಹಂಚಿಕೊಂಡರು.

ತಂದೆಯ ಕೆಲಸ ಮುಂದುವರಿಕೆ

Saama 3
ಸಭೆಯ ಅಧ್ಯಕ್ಷತೆ ವಹಿಸಿದ್ದ ದೊಡ್ಡ ಸಾಮಗರ ಹಿರಿಯ ಪುತ್ರ ಪ್ರೊ.ಎಂ.ಎಲ್​. ಸಾಮಗ ಮಾತನಾಡಿ, ಸಾಮಗಾನದ ಅರ್ಥ ತಿಳಿಸಿದರು. ತಂದೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಲಭಿಸಿದ ಭೂಮಿಯಲ್ಲಿ ಕೃಷಿ ಮಾಡಿ ಜೀವ ತುಂಬಿಸಿದ್ದರು. ಈಗ ಆ ಕೆಲಸವನ್ನು ಅವರ ಮೊಮ್ಮಕ್ಕಳು ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದರು.

ದೊಡ್ಡ ಸಾಮಗರ ಒಡನಾಡಿಗಳು, ಸ್ಥಳೀಯ ಹಿರಿಯರು ಹಾಗೂ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

555
ಬೆಳಗ್ಗೆ 10ಗಂಟೆಗೆ ಅಚಿಂತ್ಯಾದಲ್ಲಿ ಶಂಕರ ಜಯಂತಿ ಮಹೋತ್ಸವದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರವೀಂದ್ರ ಹೆಬ್ಬಾರ ಬವಲಾಡಿ ಮತ್ತು ವೈದಿಕ ವೃಂದದವರಿಂದ ವಿಷ್ಣು ಸಹಸ್ರನಾಮ ಮತ್ತು ರುದ್ರ ಪಠಣ ನಡೆಯಿತು. ಕೆಎಂಸಿಯ ನಿವೃತ್ತ ಯೋಗ ಉಪನ್ಯಾಸಕ ಗಣಪತಿ ಜೋಶಿ ಅವರು ಶ್ರೀ ಆದಿ ಶಂಕರ ಕುರಿತು ಉಪನ್ಯಾಸ ನೀಡಿದರು.

ಮೊಗೇರಿ ಜನಾರ್ದನ ಅಡಿಗ ಅವರು ವೇದಘೋಷ, ಪಂಚಾಂಗ ಪಠಣ, ಸಾಮಗ ಅಜ್ಜ-ಅಜ್ಜಿಯರ ಬಗ್ಗೆ ಬರೆದ ಕವನ ವಾಚಿಸಿದರು. ಅನುಪಮಾ ದಂಪತಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಕೊನೆಯಲ್ಲಿ ಮಧ್ವ ನಗರದ ವಿಶ್ವಕರ್ಮ ಕುಣಿತ ಭಜನಾ ಮಂಡಳಿಯವರಿಂದ ಭಜನಾ ಸೇವೆ ನೆರವೇರಿತು.

ಅಧ್ಯಾತ್ಮ ಹಾಗೂ ಕಲಾ ಕ್ಷೇತ್ರದಲ್ಲಿ ದೊಡ್ಡ ಸಾಮಗರು ಧ್ರುವ ನಕ್ಷತ್ರ. ಸಾಮಗ ಮನೆತನದ ಹೆಸರನ್ನು ಸೂರ್ಯ-ಚಂದ್ರರು ಇರುವವರೆಗೂ ಕಾಪಾಡುವ ದೊಡ್ಡ ಜವಾಬ್ದಾರಿ ಅವರ ಕುಟುಂಬಕ್ಕಿದೆ. ಸಾಮಗರ ಆದರ್ಶಗಳು ಸಾಮಗಾನ ಕೇಂದ್ರದ ಮೂಲಕ ಮುಂದುವರಿಯಲಿ. | ಪ್ರಮೋದ ಮಧ್ವರಾಜ್​. ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net