ಹಾಲಿ, ಮಾಜಿ ಶಾಸಕರ ಹೇಳಿಕೆಗೆ ಖಂಡನೆ: ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಸಂಘಟನೆ

Samaana Manaskara Vedike Press Meet Mandya
Published on

ಮಂಡ್ಯ: ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಕಾಂಗ್ರೆಸ್ ಪ್ರೇರಿತ ಹಾಗೂ ಹಣ ಪಡೆದು ಪ್ರತಿಭಟನೆ ನಡೆಸಲಾಗಿದೆ ಎಂಬ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆಯನ್ನು ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಖಂಡಿಸುತ್ತದೆ ಎಂದು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಿದ ಅಪಮಾನದ ಮಾತುಗಳ ವಿರುದ್ಧ ದಲಿತ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದಂತ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹುಜನರ ಆಹಾರದ ಹಕ್ಕನ್ನು ನಿರಾಕರಿಸುವ ಡಾ.ಕೆ.ಅನ್ನದಾನಿ ಯಾವ ಮನುವಾದಿಗೂ ಕಡಿಮೆಯಿಲ್ಲ. ಅಧಿಕಾರಕ್ಕಾಗಿ ಆತ ಯಾರ ಮನೆ ಬಾಗಿಲಾದರೂ ಕಾಯಲಿ. ಆದರೆ ದಲಿತರ ಸ್ವಾಭಿಮಾನಿ ಹೋರಾಟವನ್ನು ಅಪಮಾನಗೊಳಿಸುವ ಪ್ರಯತ್ನ ನಿಲ್ಲಿಸಬೇಕು. ತಮ್ಮ ಹೇಳಿಕೆಗೆ ಸಾಕ್ಷ್ಯಾ ಒದಗಿಸಬೇಕು. ಇಲ್ಲವೇ ಜಿಲ್ಲೆಯ ದಲಿತ ಸಮುದಾಯವನ್ನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಂದಾನಿ ಮಾತನಾಡಿ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮುಖ್ಯಮಂತ್ರಿ ಅವರನ್ನು ಓಲೈಸುವ ಭರಾಟೆಯಲ್ಲಿ ಸಿದ್ದರಾಮಯ್ಯ ಅವರ ಸಿದ್ದಾಂತವೇ ಈ ರಾಜ್ಯದಲ್ಲಿ ಅಂತಿಮ ಎಂದಿದ್ದಾರೆ. ಅಧಿಕಾರದ ಹಪಾಹಪಿಯಿಂದ ಶಾಸಕರು ಇಂತಹ ಹೇಳಿಕೆಗಳನ್ನು ಕೊಡಬಾರದು. ಅದೇ ರೀತಿ ತಮ್ಮನ್ನು ಅಧಿಕಾರಕ್ಕೇರಿಸಿದ ಸಿದ್ದಾಂತಕ್ಕೆ ನಿಷ್ಠೆಯಿಂದ ಇರಬೇಕು. ದೇಶದ ಒಕ್ಕೂಟ ವ್ಯವಸ್ಥೆಗೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಸಿದ್ಧಾಂತ ಗೌರವಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು

ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆ ಅಧ್ಯಕ್ಷ ಗಂಗರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಸಂವಿಧಾನ ಬಳಗದ ಅನಿಲ್ ಕಿರುಗಾವಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net