

ಉಪ್ಪಿನಬೆಟಗೇರಿ: ಗ್ರಾಮಗಳು ಉದ್ಧಾರವಾಗಬೇಕಾದರೆ ನಿಸ್ವಾರ್ಥ ಸೇವೆ ಮಾಡುವ ಪ್ರಾಮಾಣಿಕ ವ್ಯಕ್ತಿಯಿಂದ ಮಾತ್ರ ಸಾಧ್ಯ ಎಂದು ಧಾರವಾಡ ಯುವ ಬ್ರಿಗೇಡ್ ಸದಸ್ಯ ಪ್ರಲ್ಹಾದ ಬಸ್ಮಿ ಹೇಳಿದರು.
ಸಮೀಪದ ಕರಡಿಗುಡ್ಡ ಪಬ್ಲಿಕ್ ಶಾಲೆಯಲ್ಲಿ ಸ್ಥಳೀಯ ಗ್ರಾಮ ಪರಿವರ್ತನಾ ಟ್ರಸ್ಟ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ಪ್ರತಿಯೊಂದು ಅಭಿವೃದ್ಧಿ ಕಾರ್ಯ ಸೇರಿದಂತೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಬದಲಾವಣೆಗಳು ನಡೆಯಬೇಕಾದರೆ ಪ್ರತಿ ಗ್ರಾಮದಲ್ಲಿಯೂ ಇಂಥ ಪರಿವರ್ತನಾ ಸಂಘಗಳು ರಚನೆಗೊಳ್ಳಬೇಕು. ಅಂದಾಗ ಮಾತ್ರ ಗ್ರಾಮಗಳು ಸುಂದರವಾಗಿಲು ಸಾಧ್ಯವಾಗುತ್ತೆ. ಗ್ರಾಮದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ್ದಾರೆ. ಅಂಥವರನ್ನು ಒಂದೇ ವೇದಿಕೆಯಡಿ ಸೇರಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಪಿ.ಎಸ್. ಅಂಕಲಿ ಮಾತನಾಡಿ, ಪ್ರತಿಯೊಬ್ಬರೂ ವೈಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರ ಪ್ರೇಮ ಮೈಗೂಡಿಸಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಅದೇ ಮಾದರಿಯಲ್ಲಿ ಗ್ರಾಮ ಪರಿವರ್ತನಾ ಟ್ರಸ್ಟ್ ಸದಸ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಾಚಾರ್ಯ ಎನ್.ಟಿ. ಕಾಖಂಡಕಿ, ಮರೇವಾಡದ ಅಂತಾರಾಷ್ಟ್ರೀಯ ಕ್ರೀಡಾಪಟು ಶಿವಪ್ಪ ಸಲಕಿ, ಡಾ.ವಿನಾಯಕ ದಿಕ್ಷೀತ ಮಾತನಾಡಿದರು. ಗ್ರಾಮ ಪರಿವರ್ತನಾ ಟ್ರಸ್ಟ್ ಸದಸ್ಯ ಶಿವಶಂಕರ ಬಾಚಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಮಲ್ಲಿಕಾರ್ಜುನ ಗಡ್ಡಿ, ಬಸಯ್ಯ ಚಿಕ್ಕಮಠ, ಸಿದ್ದಪ್ಪ ಕುರುಬರ, ಬಸವರಾಜ ನರೇಂದ್ರ, ವೈದ್ಯರಾದ ಡಾ.ವಿನಾಯಕ ದಿಕ್ಷಿತ, ಡಾ.ಎಫ್.ಆರ್. ಬೇವಿನಕೊಪ್ಪ, ಡಾ.ಸುರೇಶ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾಶ್ರೀ ಕೆಂಪಸಣ್ಣವರ, ಸುಷ್ಮಿತಾ ಹೊಸಮನಿ, ಸೃಷ್ಠಿ ಪಟಗುಂದಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಬಸವರಾಜ ಗೌಡ್ರ, ಅಮೃತ ಗುತ್ತೆಪ್ಪನವರ, ಚೈತ್ರಾ ಕರವಿನಕೊಪ್ಪ ಹಾಗೂ ಅಂತಾರಾಷ್ಟ್ರೀಯ ಓಟಗಾರ ಶಿವಪ್ಪ ಸಲಕಿ ಅವರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಶಾಂತೇಶ್ವರ ಹಿರೇಮಠದ ಚನಬಸಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪರಿವರ್ತನಾ ಅಧ್ಯಕ್ಷ ಶಿವಪ್ಪ ಕುರಗುಂದ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನಾ ರೇವಡಿ, ಬಸವರಾಜ ಕುರಗುಂದ, ಮಲ್ಲನಗೌಡ ಗೌಡ್ರ, ಶೇಖಪ್ಪ ಮಂಗಳಗಟ್ಟಿ, ಮಹಾಬಳೇಶ್ವರ ಸಂಗಪ್ಪಣ್ಣವರ, ಪಿಡಿಒ ಮಡಿವಾಳರ, ಟ್ರಸ್ಟ್ ಸದಸ್ಯರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬಸನಗೌಡ ಪಾಟೀಲ, ಬಸವರಾಜ ಗುತ್ತೆಪ್ಪನವರ, ವಿಠ್ಠಲ ತಡಸಿ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.