ವಚನಗಳ ಪಠಣದಿಂದ ಆತ್ಮೋದ್ಧಾರ

HSD panchamasali samaja 03 p3
Published on

ಹೊಸದುರ್ಗ: ಆತ್ಮೋದ್ಧಾರಕ್ಕೆ ಅಗತ್ಯವಾಗಿರುವ ಎಲ್ಲ ಅಂಶಗಳನ್ನು ಹೊಂದಿರುವ ಬಸವಾದಿ ಶರಣರ ವಚನಗಳನ್ನು ಓದುವುದರಿಂದ ಜೀವನ ಪಾವನವಾಗುತ್ತದೆ ಎಂದು ಹರಿಹರದ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಧ್ಯಾನ, ಇಷ್ಟಲಿಂಗ ಮಹಾಪೂಜೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣರ ವಚನಗಳಲ್ಲಿ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಮಾಧಾನ ಸಿಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ವಚನಗಳ ಅನುಸಂಧಾನದ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಬಹುದು ಎಂದರು.

ಮುಂಜಾನೆ ಅಂಗದ ಮೇಲೆ ಲಿಂಗವನ್ನಿಟ್ಟುಕೊಂಡು ಪೂಜೆ ಹಾಗೂ ಧ್ಯಾನ ಮಾಡಿದರೆ ಅಪಮೃತ್ಯು ದೂರವಾಗಲಿದೆ. ಸದ್ಯ ಜನರು ಒತ್ತಡದ ಬದುಕಿನಿಂದಾಗಿ ಜಂಜಾಟದಲ್ಲಿ ಸಿಲುಕಿಕೊಂಡು ಖಿನ್ನತೆಗೊಳಗಾಗಿದ್ದಾರೆ. ಹಲವಾರು ರೋಗಗಳಿಗೆ ಚಿಂತೆಯೇ ಮೂಲ ಕಾರಣವಾಗಿದೆ. ಪ್ರತಿನಿತ್ಯ ಇಷ್ಟಲಿಂಗ ಪೂಜೆಯ ಮೂಲಕ ಶಿವಯೋಗ ಮಾಡುವುದರಿಂದ ಇಂತಹ ರೋಗಳಿಂದ ದೂರವಾಗಬಹುದು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಮೂಲ ಕಾಯಕ ಕೃಷಿ. 12ನೇ ಶತಮಾನದಲ್ಲಿ ಬಸವಣ್ಣನ ಪ್ರಥಮ ಅನುಯಾಯಿಗಳಾಗುವ ಮೂಲಕ ವೀರಶೈವ ಲಿಂಗಾಯಿತ ಧರ್ಮ ಹಾಗೂ ಮಠಗಳ ಬೆಳವಣಿಗೆಗೆ ಪಂಚಮಸಾಲಿ ಸಮಾಜ ಕಾರಣವಾಗಿದೆ. ಇಂತಹ ಭವ್ಯ ಪರಂಪರೆ ಹೊಂದಿರುವ ಸಮುದಾಯ ಸಂಘಟಿತರಾಗಿ ಶಕ್ತಿ ಪಡೆಯುವ ಅಗತ್ಯವಿದೆ. ಪಂಚಮಸಾಲಿಗಳು ಕೊಡುವ ಗುಣ ಹೊಂದಿದ್ದಾರೆ ವಿನಃ ಬೇಡುವ ಕೈಗಳಲ್ಲ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಪಂಚಮಸಾಲಿ ಸಮಾಜ ರಾಜಕೀಯವಾಗಿ ನನ್ನ ಕೈಹಿಡಿದು ರಾಜಕೀಯ ಶಕ್ತಿ ನೀಡಿದೆ. ಸಮಾಜದ ಜತೆಗಿದ್ದು ಅಭಿವೃದ್ಧಿಯ ಕಾರ್ಯಗಳಲ್ಲಿ ಕೈ ಜೋಡಿಸುತ್ತೆನೆ. ಸಮುದಾಯ ಭವನ ನಿರ್ಮಾಣದ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೀರಶೈವ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮೃತ್ಯುಂಜಯಪ್ಪ, ಕಾರ್ಯದರ್ಶಿ ಧನುಶಂಕರ್, ಜಯದೇವ ಹಾಸ್ಟೆಲ್ ಸಮಿತಿ ಅಧ್ಯಕ್ಷ ಎಚ್.ಪಿ.ಜಗದೀಶ, ಒಪ್ಪತ್ತಿನಸ್ವಾಮಿ ಬ್ಯಾಂಕ್ ಅಧ್ಯಕ್ಷ ಸಿದ್ದರಾಮೇಶ್, ಹಾಲೇಶ್, ಪ್ರಕಾಶ್ ಇತರರಿದ್ದರು.

ಯೋಗಾಸನ, ಧ್ಯಾನ: ತಾಲೂಕು ಕ್ರೀಡಾಂಗಣದಲ್ಲಿ ಮುಂಜಾನೆ 6ಕ್ಕೆ ವಚನಾನಂದ ಶ್ರೀಗಳ ನೇತೃತ್ವದಲ್ಲಿ ರೋಗಮುಕ್ತಕ್ಕಾಗಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. 200ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸರಳ ಹಾಗೂ ದಿನನಿತ್ಯದ ಆರೋಗ್ಯಕ್ಕೆ ಅಗತ್ಯವಾದ ಯೋಗಾಸನಗಳನ್ನು ಹಾಗೂ ಧ್ಯಾನದ ವಿಧಾನಗಳನ್ನು ಶ್ರೀಗಳು ಹೇಳಿಕೊಟ್ಟರು. ಬಳಿಕ ಜಯದೇವ ಸಭಾಂಗಣದಲ್ಲಿ ಸಾಮೂಹಿಕ ಇಷ್ಟಲಿಂಗಪೂಜೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net