

ಅರಕಲಗೂಡು: ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ದಲಿತ ನೌಕರರ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ಇತ್ತೀಚೆಗೆ ನಿಧನರಾದ ಪ್ರೊ.ಮಹೇಶ್ ಚಂದ್ರ ಗುರು ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪ್ರೊ. ಮಹೇಶ್‌ಚಂದ್ರಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಆಚರಿಸಲಾಯಿತು.
ದಸಂಸ ರಾಜ್ಯ ಸಮಿತಿ ಸದಸ್ಯ ಈರೇಶ್ ಹಿರೇಹಳ್ಳಿ ಮಾತನಾಡಿ, ಮಹೇಶ್ ಚಂದ್ರಗುರು ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವ ಜತೆಗೆ ಪ್ರಗತಿಪರ ಚಿಂತಕರಾಗಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಇವರ ನಿಧನದಿಂದಾಗಿ ಶೋಷಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಆದರ್ಶಗನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ವೆಂಕಟೇಶ್ ಮೂರ್ತಿ, ದಸಂಸ ಅಂಬೇಡ್ಕರ್ ವಾದ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ದುಮ್ಮಿ, ವಕೀಲ ಪ್ರಕಾಶ್ ಹೆಗ್ಗತ್ತೂರು, ಮುಖಂಡರಾದ ಕಟ್ಟೇಪುರ ಮಂಜು, ಸಂತೆಮರೂರು ದೇವರಾಜ್, ಮುಂಡಗೋಡು ರಂಗಸ್ವಾಮಿ, ಕೆಲ್ಲೂರು ಕೃಷ್ಣ, ನಾಗೇಂದ್ರ, ಹಂಪಾಪುರ ದ್ಯಾವಯ್ಯ, ಮುಸವತ್ತೂರು ಕುಮಾರ, ಶಿರದನಹಳ್ಳಿ ಶಿವಣ್ಣ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ ದಲಿತ ನೌಕರರ ಒಕ್ಕೂಟದ ತಾಲೂಕು ಸಂಚಾಲಕರಾಗಿ ಸಣ್ಣಪ್ಪ ಹಂಪಾಪುರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.