

ತುಮಕೂರು: ಪೌರಕಾರ್ಮಿಕರು ಇಲ್ಲದೇ ಇದ್ದರೆ ಮಹಾನಗರ ಪಾಲಿಕೆಯನ್ನು ಒಂದು ದಿನವೂ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ಮೇಯರ್ ಫರಿದಾಬೇಗಂ ಪೌರಕಾರ್ಮಿಕರ ಸೇವೆಯ ಮಹತ್ವವನ್ನು ಸ್ಮರಿಸಿದರು.
ನಗರದ ಬಾಲಭವನದಲ್ಲಿ ಬುಧವಾರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಸಮಯದಲ್ಲಿ ಪೌರಕಾರ್ಮಿಕರು ಸೇನಾನಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನಗರದಾದ್ಯಂತ ಸ್ಯಾನಿಟೈಸ್ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ನಿರತರಾಗಿದ್ದು, ಇಂತಹ ಸೇವೆಗೆ ನಾವೆಲ್ಲರೂ ಸೆಲ್ಯೂಟ್ ಹೊಡೆಯಲೇಬೇಕು ಎಂದರು.
ನಗರದ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರು ಶ್ರಮವಹಿಸದೇ ಇದಿದ್ದರೆ ಕರೊನಾ ಇಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಆ ದೇವರು ನಿಮ್ಮ ಜತೆ ಇರುವುದರಿಂದಲೇ ಆರೋಗ್ಯದಿಂದ ಇರೋದು. ನಿಮ್ಮ ಕುಟುಂಬಕ್ಕೋಸ್ಕರ ಹೊರಗೆ ಬಂದು ಕೆಲಸ ಮಾಡುತ್ತಿದ್ದೀರಾ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಜತೆಗೂಡಿ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಕಾರ್ಮಿಕರು ತಮಗೆ ಅಗತ್ಯವಿರುವ ಸೌಲಭ್ಯಗಳನ್ನು ಹಿಂಜರಿಯದೇ ಕೇಳಿ ಪಡೆದುಕೊಳ್ಳಬೇಕು. ಸೌಲಭ್ಯ ಒದಗಿಸಲು ನಾವು ಸಹ ಬದ್ಧರಿದ್ದೇವೆ ಎಂದು ಭರವಸೆಯಿತ್ತರು. ಪ್ರತಿದಿನ ನಗರದ ಸ್ವಚ್ಛತೆ ನಿರ್ವಹಿಸುತ್ತಿರುವ ಇವರ ನಿಸ್ವಾರ್ಥ ಸೇವೆಯಿಂದ ತುಮಕೂರು ನಗರ ಸ್ವಚ್ಛ ಸರ್ವೇಕ್ಷಣೆಯಲ್ಲಿ ರಾಜ್ಯದಲ್ಲೇ 48ನೇ ಸ್ಥಾನ ಪಡೆದಿದೆ. ಇದು ತುಮಕೂರಿಗೆ ಹೆಮ್ಮೆಯ ಸಂಗತಿ. ಇದೇ ರೀತಿ ಕಾರ್ಯನಿರ್ವಹಿಸಿ ನಮ್ಮ ತುಮಕೂರು ಹಸಿರು ತುಮಕೂರು ಎಂಬ ೋಷ ಸಾಕಾರವಾಗಲು ಸೇವೆ ಸಲ್ಲಿಸಬೇಕು ಎಂದು ಪಾಲಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಕರೆ ನೀಡಿದರು.
ಉಪ ಮೇಯರ್ ಶಶಿಕಲಾ, ಆಯುಕ್ತೆ ರೇಣುಕಾ, ಮಾಜಿ ಉಪಮೇಯರ್ ರೂಪಾ, ಪಾಲಿಕೆ ವಿಪಕ್ಷ ನಾಯಕ ಸಿ.ಎನ್. ರಮೇಶ್, ಕಾರ್ಪೋರೇಟರ್‌ಗಳಾದ ಧರಣೇಂದ್ರ ಕುಮಾರ್, ಶ್ರೀನಿವಾಸ್, ವಿಷ್ಣು ವರ್ಧನ್, ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪೌರಕಾರ್ಮಿಕರಿಗೆ ಸೂರು: ವಸತಿರಹಿತ ಪೌರಕಾರ್ಮಿಕರಿಗೆ ಸೂರು ನಿರ್ಮಿಸುವ ಯೋಜನೆ ಪ್ರಗತಿ ಹಂತದಲ್ಲಿದೆ. ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು ಇಂತಹ ಕಾಯಕ ಯೋಗಿಗಳಿಗೆ ವಸತಿ ಕಲ್ಪಿಸುವ ಯೋಜನೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಪ್ರಗತಿಯಲ್ಲಿದೆ ಎಂದು ಟಿ.ಕೆ.ನರಸಿಂಹಮೂರ್ತಿ ತಿಳಿಸಿದರು.