

ಧಾರವಾಡ: ನಗರದ ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ (ಪ್ರೌಢ ಶಾಲೆ ವಿಭಾಗ)ದ 1967-1968ನೇ ಸಾಲಿನ ಹಳೇ ವಿದ್ಯಾರ್ಥಿಗಳು ಶಾಲೆಯಲ್ಲಿ ಇತ್ತೀಚೆಗೆ ಗುರುವಂದಾನ ಕಾರ್ಯಕ್ರಮ ಆಚರಿಸಿದರು.
ಸುಮಾರು 55 ವರ್ಷಗಳ ಬಳಿಕ ಒಂದೆಡೆ ಸೇರಿದ ಎಲ್ಲ ಗೆಳೆಯರು ತಮ್ಮ ಶಾಲಾ ಕೊಠಡಿಗಳಿಗೆ ತೆರಳಿ ಕೆಲ ಹೊತ್ತು ಕಾಲ ಕಳೆದರಲ್ಲದೆ, ಶಾಲಾ ದಿನಗಳನ್ನು ಮೆಲಕು ಹಾಕುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಬಳಿಕ ತಮಗೆ ವಿದ್ಯೆ ನೀಡಿದ ಗುರುಗಳಾದ ಪುಷ್ಪಾ ಘಾಟೆ, ಕಾತವಟೆ, ಬಿ.ಎಸ್.ಜೋಶಿ, ಚಂದನಕರ ಅವರಿಗೆ ಸನ್ಮಾನಿಸಿ ಗೌರವ ವಂದನೆ ಸಲ್ಲಿಸಿದರು.
ಶಾಲೆ ಮುಖ್ಯಾಧ್ಯಾಪಕಿ ಸಿಂಧು ಶಿರೂರ ಮಾತನಾಡಿ, ಶಾಲೆಯಲ್ಲಿ ಶಿಕ್ಷಣ ಪಡೆದು ಉತ್ತಮ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ತಾವು ಕಲಿತ ಶಾಲೆ ನೆನಪಿಸಿಕೊಂಡು ಗುರುವಂದನೆ ನಡೆಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಕೆ.ಇ. ಬೋರ್ಡಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ರಾಜಪುರೋಹಿತ, ಪ್ರಕಾಶ ಜೋರಾಪುರ, ವಿಠ್ಠಲ ಮಾಹುಲಿ, ಪ್ರಕಾಶ ಸೂರ್ಯವಂಶಿ, ಮೋಹನ ದೇಸಾಯಿ, ಅರವಿಂದ ದೇಸಾಯಿ, ಇತರರು ಇದ್ದರು.