

ಅನ್ಸಾರ್ ಇನೋಳಿ, ಉಳ್ಳಾಲ ಮೂರನೇ ವರ್ಷದ ಕಂಬಳಕ್ಕೆ ನರಿಂಗಾನ ಸಜ್ಜಾಗುತ್ತಿದೆ. ಇದೇ ವೇಳೆ ಕಂಬಳ ನಡೆಯುವ ಪರಿಸರದಲ್ಲಿ ನೆರಳಿನಾಶ್ರಯಕ್ಕೆ ಗಿಡಗಳನ್ನು ನೆಡಲಾಗಿದ್ದು, ಕಂಬಳ ತರಬೇತಿ, ತುಳು ಭವನ ನಿರ್ಮಾಣ ನಿಟ್ಟಿನಲ್ಲಿ ಆಯೋಜಕರು ರೂಪುರೇಷೆ ಹಾಕಿದ್ದಾರೆ. ಗುಡ್ಡ ವ್ಯಾಪ್ತಿಯ ನಿರ್ಜನ ಪ್ರದೇಶ ಎನಿಸಿರುವ ನರಿಂಗಾನ ಗ್ರಾಮದ ಬೋಳ ಪದವಿನಲ್ಲಿರುವ ಸರ್ಕಾರಿ ಜಮೀನು ಯಾರದ್ದೋ ಅತಿಕ್ರಮಣಕ್ಕೆ ಒಳಪಡುವ ಆತಂಕದಲ್ಲಿತ್ತು. ಹಿಂದೆ ಪಜೀರ್ ಗ್ರಾಮದ ಪಾನೇಲದ ನಡೆಯುತ್ತಿದ್ದ ಕಂಬಳ ಮತ್ತೆ ಪ್ರಾರಂಭಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಮಟ್ಟದಲ್ಲಿ ಕಂಬಳ ಅಯೋಜಿಸಲು ಶಾಸಕರು ಮುಂದಾಗಿ ಪಾನೇಲ ಕಂಬಳ ಅಯೋಜಕರಲ್ಲಿ ಮಾತುಕತೆ ನಡೆಸಿದಾಗ ಉತ್ತಮ ಸ್ಪಂದನೆ ಸಿಕ್ಕಿತು. ಈ ನಿಟ್ಟಿನಲ್ಲಿ ಬೋಳಪದವಿನ ಸರ್ಕಾರಿ ಜಾಗ ಸೂಕ್ತ ಎನಿಸಿದ್ದರಿಂದ ಮೂರು ವರ್ಷಗಳ ಹಿಂದೆ ಸರ್ಕಾರಿ ಅನುದಾನದಲ್ಲಿ ಕಂಬಳ ಕರೆ ನಿರ್ಮಿಸಿ ಕಂಬಳ ನಡೆಸಲಾಯಿತು. ಕಂಬಳ ತರಬೇತಿಗೆ ಯೋಜನೆ: ಬೋಳಪದವಿನಲ್ಲಿ 20 ಎಕರೆ ಸರ್ಕಾರಿ ಜಮೀನು ಇದ್ದು, ಹಲವರು ಕಣ್ಣಿಟ್ಟಿದ್ದರು. ಆದರೆ ಇದು ಸರ್ಕಾರದ ಸ್ವತ್ತಾಗಿಯೇ ಉಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಜಮೀನನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಬಳಿಕ ಐದು ಎಕರೆ ಜಮೀನನ್ನು ಕಂಬಳ ಸಮಿತಿಗೆ ಪಡೆಯುವ ಯೋಚನೆ ಹೊಂದಲಾಗಿದೆ. ಕೇರಳ ಕರ್ನಾಟಕ ಗಡಿಭಾಗ ಆಗಿರುವುದರಿಂದ ಕಂಬಳ ಆಸಕ್ತರಿಗೆ ವಿವಿಧ ರೀತಿಯ ತರಬೇತಿ ನೀಡುವ ನಿಟ್ಟಿನಲ್ಲಿ ಅಕಾಡೆಮಿ ಸ್ಥಾಪಿಸುವ ಜತೆಗೆ ತುಳು ಭವನ ನಿರ್ಮಿಸುವ ಯೋಜನೆ ಇದೆ. ನೆರಳಿನಾಶ್ರಯಕ್ಕೆ ಗಿಡಗಳ ನಾಟಿ: ಇಲ್ಲಿ ಕಂಬಳ ಆರಂಭಗೊಂಡ ಬಳಿಕ ಜನಾಕರ್ಷಣೆಯ ತಾಣ ಎನಿಸಿದೆ. ಅಲ್ಲದೆ ಇಲ್ಲೇ ವಿವಿಧ ಕ್ರೀಡಾಕೂಟಗಳೂ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪರಿಸರದಲ್ಲಿ ನೆರಳು, ತಂಪಾದ ಗಾಳಿ ಇರಬೇಕೆನ್ನುವ ನೆಲೆಯಲ್ಲಿ ಅರಣ್ಯ ಇಲಾಖೆ ಸಹಕಾರದಲ್ಲಿ ಪರಿಸರದ ಸುತ್ತಮುತ್ತ 500 ಗಿಡಗಳನ್ನು ನಾಟಿ ಮಾಡಲಾಗಿದೆ. ಕಂಬಳ ಕರೆ ಸನಿಹದಲ್ಲೇ ಒಂದೂವರೆ ಎಕರೆ ಜಮೀನಿನಲ್ಲಿ ವಿವಿಧ ಹಣ್ಣು, ಔಷಧೀಯ ಗುಣಗಳ ಹಾಗೂ ಇತರ ಗಿಡಗಳನ್ನು ನೆಟ್ಟು ಪರಿಸರ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿರುವ ಮೂರು ಎಕರೆ ಜಮೀನು 30 ಅಡಿಯಷ್ಟು ಗುಂಡಿ ಪ್ರದೇಶ ಹೊಂದಿದ್ದು, ಸಮತಟ್ಟು ಮಾಡಲಾಗಿದೆ. ಈ ಜಾಗದಲ್ಲಿ ತೆಂಗಿನ ಗಿಡಗಳನ್ನು ನಾಟಿ ಮಾಡಲು ಸಮಿತಿ ಯೋಚಿಸಿದೆ. ಮುಖ್ಯಮಂತ್ರಿಗಳಿಂದ ಉದ್ಘಾಟನೆ ಈ ಬಾರಿ ಮೂರನೇ ವರ್ಷದ ಕಂಬಳ ನಡೆಯಲಿದ್ದು, ದಿನಗಣನೆ ಆರಂಭಗೊಂಡಿದೆ. ಇದೇ ಸಂದರ್ಭ ಪರಿಸರದಲ್ಲಿ ಹಲವಾರು ಯೋಜನೆಗಳನ್ನು ಕಂಬಳ ಸಮಿತಿ ಹಾಕಿಕೊಂಡಿದೆ. ಈ ಯೋಜನೆಗೆ ಇನ್ನಷ್ಟು ಬಲತರುವ ನಿಟ್ಟಿನಲ್ಲಿ ಈ ಬಾರಿಯ ಕಂಬಳ ಉದ್ಘಾಟನೆಗೆ ಮುಖ್ಯಮಂತ್ರಿಯೇ ಬರಬೇಕು ಎನ್ನುವ ಬೇಡಿಕೆಯನ್ನು ಸಮಿತಿಯು ಸ್ಪೀಕರ್ ಖಾದರ್ ಮುಂದಿಟ್ಟಿದ್ದರು. ಅದರಂತೆ ಮುಖ್ಯಮಂತ್ರಿಯೂ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅವರ ಸ್ವಾಗತಕ್ಕೆ ಸಮಿತಿ ಸಜ್ಜಾಗಿದೆ. ಜನವರಿ 11ರಂದು ಸಂಜೆ ಮುಖ್ಯಮಂತ್ರಿ ಕಂಬಳಕ್ಕೆ ಚಾಲನೆ ನೀಡುವ ನಿರೀಕ್ಷೆ ಇದೆ. ಅವರೊಂದಿಗೆ ಇತರ ಸಚಿವರು ಭಾಗವಹಿಸಲಿದ್ದಾರೆ.
ಜಮೀನನ್ನು ಸಂಘ ಸಂಸ್ಥೆಗಳು ಕೇಳಿದ್ದರೂ ಪಂಚಾಯಿತಿ ಕೊಟ್ಟಿಲ್ಲ. ಈ ಜಾಗದಲ್ಲಿ ಮೈದಾನ, ತುಳು ಗ್ರಾಮ ನಿರ್ಮಾಣ ಯೋಜನೆಯಿದೆ. ಊರಿನವರು ಸೇರಿ ವಾಡುತ್ತಿರುವ ನರಿಂಗಾನ ಕಂಬಳ ಜ.11ರಂದು ಮುಖ್ಯಮಂತ್ರಿ ಅಧಿಕತವಾಗಿ ಉದ್ಘಾಟಿಸಲಿದ್ದಾರೆ. ಇತರ ಸಚಿವರು ಭಾಗವಹಿಸಲಿದ್ದಾರೆ. - ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ ಇದು ಗಡಿಭಾಗವಾಗಿದ್ದು, 20 ಎಕರೆ ಸರ್ಕಾರಿ ಜಮೀನಿದೆ. ಕಂಬಳ ಅಕಾಡಮಿ ಸ್ಥಾಪಿಸಿ ತರಬೇತಿ ನೀಡುವ ಯೋಚನೆಯಿದ್ದು, ಐದು ಎಕರೆ ಜಮೀನಿಗೆ ಬೇಡಿಕೆ ಸಲ್ಲಿಸಲಾಗಿದೆ. ತುಳು ಭವನ ನಿರ್ವಾಣ ಯೋಜನೆಯೂ ಇದೆ. ಪರಿಸರ ತಂಪಾಗಿಡುವ ನಿಟ್ಟಿನಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಗಿಡಗಳನ್ನು ನೆಡಲಾಗಿದೆ. - ಪ್ರಶಾಂತ್ ಕಾಜವ, ಕಾರ್ಯಾಧ್ಯಕ್ಷ, ನರಿಂಗಾನ ಕಂಬಳ ಸಮಿತಿ