

ಹುಬ್ಬಳ್ಳಿ: ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಪ್ರೇರಣೆಯಿಂದ ವಸುಂಧರಾ ಫೌಂಡೇಶನ್ ವತಿಯಿಂದ ಇಲ್ಲಿನ ಗೋಪನಕೊಪ್ಪ- ಉಣಕಲ್ ಮುಖ್ಯರಸ್ತೆಯಲ್ಲಿ ಜೆಕೆ ಸ್ಕೂಲ್ ಬಳಿ ನೆಟ್ಟಿರುವ 150 ಸಸಿಗಳನ್ನು ರಾಜ್ಯ ಸರ್ಕಾರದ ಪರಿಸರ ರಾಯಭಾರಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ವೀಕ್ಷಿಸಿ, ಹರಸಿದರು.
ಫೌಂಡೇಷನ್ನಿಂದ 6 ವರ್ಷಗಳ ಹಿಂದೆ 150 ಹೊಂಗೆ, ಬಸವನ ಪಾದ ಸಸಿಗಳನ್ನು ನೆಡಲಾಗಿತ್ತು. ಅಂದಿನಿಂದ ಈವರೆಗೆ ಅದಕ್ಕೆ ನೀರೆರೆದು ಪೋಷಿಸಲಾಗುತ್ತಿದೆ. ಅವು ಈಗ ಎರಡು ಆಳೆತ್ತರಕ್ಕೆ ಬೆಳೆದುನಿಂತಿವೆ. ಈ ಸ್ಥಳಕ್ಕೆ ಸಾಲುಮರದ ತಿಮ್ಮಕ್ಕ ಆಗಮಿಸಿ ಫೌಂಡೇಶನ್ ಕಾರ್ಯ ಮೆಚ್ಚಿಕೊಂಡರು. ನಂತರ "ಸಾಲುಮರದ ತಿಮ್ಮಕ್ಕ ಪ್ರೇರಣೆಯ 150 ಸಾಲು ಮರಗಳು' ಎಂಬ ನಾಮಫಲಕ ಉದ್ಘಾಟಿಸಿದರು.
ಶಾಲಾ ಮಕ್ಕಳು ಅಜ್ಜಿಯ ಕಾಲಿಗೆ ಎರಗಿ ಆಶೀರ್ವಾದ ಪಡೆದರು. "ಎಲ್ಲರೂ ಸಸಿ ನೆಟ್ಟು ಚೆನ್ನಾಗಿ ಬೆಳೆಸಿ ಮಕ್ಕಳೇ' ಎಂದು ವೃಕ್ಷಮಾತೆ ಕರೆ ಕೊಟ್ಟರು. ನಂತರ ಮೈಸೂರು ಪೇಟ ತೊಡಿಸಿ ಅವರನ್ನು ಸನ್ಮಾನಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ, ಧರ್ಮರಾಜ ಅಬ್ಬಯ್ಯ, ಚನ್ನು ಹೊಸಮನಿ, ಪವನ ಮಿಸ್ಕಿನ, ಜೆಕೆ ಸ್ಕೂಲ್ ಸಿಬ್ಬಂದಿ, ಮಕ್ಕಳು, ಸ್ಥಳಿಯರು ಪಾಲ್ಗೊಂಡಿದ್ದರು.