

ಮೂಲ್ಕಿ: ಮೂಲ್ಕಿ ಹಾಗೂ ಪಡುಪಣಂಬೂರು ಗ್ರಾಮದ ಗಡಿ ಶೇಡಿಕಟ್ಟ ಬಳಿ ಹಳೆಯ ಅಣೆಕಟ್ಟಿಗೆ ಹಲಗೆ ಹಾಕದ ಕಾರಣ ಕೃಷಿ ಗದ್ದೆಗಳಿರುವ ಮೂಲ್ಕಿ ನಗರ ವ್ಯಾಪ್ತಿಯ ಚಿತ್ರಾಪು, ಜನಿ, ಕಲ್ಸಂಕ, ಪಡುಬೈಲು ಪ್ರದೇಶದ ಗದ್ದೆಗಳಲ್ಲಿ ಉಪ್ಪು ನೀರು ತುಂಬಿದೆ. ಇದರಿಂದಾಗಿ 500 ಎಕರೆ ಭೂಮಿಯಲ್ಲಿ ಕೃಷಿಗೆ ತೀವ್ರ ತೊಂದರೆಯಾಗಿದೆ. ಭತ್ತ ಹಾಗೂ ದ್ವಿದಳ ಧಾನ್ಯಗಳು ಮತ್ತು ತರಕಾರಿ ಬೆಳೆಯುವ ಪ್ರದೇಶದಲ್ಲಿ ಉಪ್ಪು ನೀರು ಗದ್ದೆಗೆ ನುಗ್ಗಿದ್ದರಿಂದ ಎರಡನೇ ಬಾರಿ ಗದ್ದೆಯಲ್ಲಿ ಕೃಷಿ ವಾಡಲು ತೀವ್ರ ತೊಂದರೆಯಾಗಿದೆ. ಪರಿಸ್ಥಿತಿ ಯಥಾಸ್ಥಿತಿ ಮುಂದುವರಿದಲ್ಲಿ ಬಾವಿಗೆ ಉಪ್ಪು ನೀರು ಸೇರುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೂ ಅಭಾವ ಉಂಟಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಶೇಡಿಕಟ್ಟ ಹಳೆಯ ಅಣೆಕಟ್ಟಿನ ಸಮಸ್ಯೆಯಿಂದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಕೃಷಿಕರ ಪಾಡು ಹೇಳತೀರದ ಮಟ್ಟಿಗೆ ಇಳಿದಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಹಾಗೂ ಮೂಲ್ಕಿ ನಗರ ಪಂಚಾಯಿತಿ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೂಲ್ಕಿ ನಗರ ಪಂಚಾಯಿತಿಗೆ ಅಣೆಕಟ್ಟು ಸಮಸ್ಯೆಗಳ ಬಗ್ಗೆ ಮನವಿ ನೀಡಲಾಗಿದೆ. ಆದರೂ ಸಮಸ್ಯೆ ಪರಿಹಾರವಾಗದೆ ನಾವು ತೊಂದರೆಗೀಡಾಗಿದ್ದೇವೆ. - ರಮಾನಂದ ಪಡುಬೈಲು, ಕೃಷಿಕರು