

ದಾಬಸ್‌ಪೇಟೆ: ಯಾರೋ ಒಬ್ಬರು ಕೆಟ್ಟರೆ ಇಡಿ ಯುವ ಸಮೂಹವನ್ನೇ ದೂಷಿಸುವುದು ಸಲ್ಲದು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂನ ಹಳೇ ನಿಜಗಲ್ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು. ಯಾವುದೋ ಒಂದು ಘಟನೆ ಇಟ್ಟುಕೊಂಡು ಇಂದು ಯುವಕರು ಕೆಟ್ಟಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ಆದರೆ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಯುವಕರೆಲ್ಲರನ್ನೂ ಕೆಟ್ಟವರು ಎನ್ನಲಾಗದು. ಕರೊನಾದಿಂದ ನಗರ-ಪಟ್ಟಣಗಳಲ್ಲಿ ಕೆಲಸವಿಲ್ಲದಾಗಿ ಗ್ರಾಮಕ್ಕೆ ಮರಳಿ ವ್ಯವಸಾಯ ಮಾಡಲು ಅಣಿಯಾಗುತ್ತಿದ್ದಾರೆ. ಇದರಿಂದ ಯುವ ಸಮೂಹ ಸಂಪೂರ್ಣ ಹಾದಿತಪ್ಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ತುಮಕೂರಿನ ಹಿರೇ ಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುವಕರು ವ್ಯಸನದ ಬಗ್ಗೆ ವಿವೇಚನಾಯುಕ್ತವಾಗಿ ವರ್ತಿಸಬೇಕು. ಕೆಟ್ಟದ್ದು, ಒಳ್ಳೆಯದ್ದು ಎಲ್ಲ ಕಡೆ ಇರುತ್ತದೆ. ಆದ್ದರಿಂದ, ವ್ಯಸನಗಳಿಗೆ ಒಳಗಾಗದೆ, ಸಂಸ್ಕೃತಿಯನ್ನು ಕಟ್ಟುವತ್ತ ಗಮನನೀಡಬೇಕು ಎಂದು ಹೇಳಿದರು.
ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಎನ್.ವಿ. ಗೋಪಿನಾಥ, ಮಾಜಿ ಸದಸ್ಯರಾದ ಶ್ವೇತಾ ಕುಮಾರ್, ಬಿಲ್‌ಕಲೆಕ್ಟರ್ ಶ್ರೀನಿವಾಸ, ಯುವಮುಖಂಡರಾದ ಎಚ್. ವಿಜಯ್‌ಕುಮಾರ್, ಎಚ್. ರವಿಕುಮಾರ್, ಎಚ್. ಚಿಕ್ಕರಾಜು, ಎಚ್. ಚಂದ್ರಶೇಖರ್ ಮತ್ತಿತರರಿದ್ದರು.