

ಹರಿಹರ: ಉತ್ತಮ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜತೆಗೆ ಕೌಶಲ ವೃದ್ಧಿಸಿಕೊಳ್ಳಲು ಆದ್ಯತೆ ನೀಡಿ ಎಂದು ತರಬೇತುದಾರ ಎ.ಆರ್. ಸಲೀಮ್ ಮಲಿಕ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಐಕ್ಯೂಎಸಿ ಸಹಯೋಗದಲ್ಲಿ ಪ್ರೇರಣಾ ಕೋಶದಿಂದ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೃದು ಕೌಶಲಗಳು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈ ಹಿಂದೆ ಶೈಕ್ಷಣಿಕ ಅರ್ಹತೆಯೇ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಆಧಾರವಾಗಿತ್ತು. ಆದರೆ ಪ್ರಸ್ತುತ ಅಭ್ಯರ್ಥಿಯ ಮೃದು ಕೌಶಲ್ಯಗಳೆನಿಸಿದ ಸಂವಹನ, ತಂಡದಲ್ಲಿ ಕೆಲಸ ಮಾಡುವ ಪರಿ, ಸಮಸ್ಯೆ ಪರಿಹರಿಸುವುದು, ಕೇಳಿಸಿಕೊಳ್ಳುವ ಮತ್ತು ಮಾತನಾಡುವ ನೈಪುಣ್ಯ, ಕಾರ್ಯವನ್ನು ದತ್ತು ಪಡೆಯುವುದು, ವ್ಯಕ್ತಿತ್ವ ವಿಕಸನ, ನಾಯಕತ್ವ, ಆಂಗಿಕ ಭಾಷೆ, ಪ್ರಸ್ತುತತೆ, ಸಮಯದ ನಿರ್ವಹಣೆಯ ಗುಣಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಸರ್ಕಾರಿ ನೌಕರಿಗಳನ್ನೇ ಆಧರಿಸುವ ಕಾಲ ಈಗಿಲ್ಲ. ಜಾಗತೀಕರಣದ ಪರಿಣಾಮ ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯದಕ್ಷತೆ, ವ್ಯಕ್ತಿತ್ವವನ್ನಾಧರಿಸಿ ಹುದ್ದೆ ಹಾಗೂ ವೇತನ ನೀಡುತ್ತಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಎಂ.ಎನ್. ರಮೇಶ್ ಮಾತನಾಡಿ, ಮೃದು ಕೌಶಲಗಳಿಲ್ಲದ ವಿದ್ಯಾರ್ಥಿಗಳಿಗೆ ಭವಿಷ್ಯವೇ ಇಲ್ಲ ಎಂಬ ಸ್ಥಿತಿ ಇದೆ. ಬೇರೆ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರುವವರಾಗಲಿ, ಸ್ವಂತ ಉದ್ಯಮ, ವ್ಯಾಪಾರ ಆರಂಭಿಸುವ ಕನಸು ಇದ್ದವರಿಗೂ ಮೃದು ಕೌಶಲ ಮತ್ತು ನಿರೀಕ್ಷಿತ ವ್ಯಕ್ತಿತ್ವ ಅಭಿವೃದ್ಧಿ ಅನಿವಾರ್ಯ ಎಂದರು.
ಪ್ರೇರಣಾ ಕೋಶದ ಅಧಿಕಾರಿ ಬಸವರಾಜ್ ಬಿ. ಪಾಟೀಲ್ ಮಾತನಾಡಿದರು. ಉದ್ಯೋಗ ಕೋಶದ ಸಂಯೋಜನಾಧಿಕಾರಿ ಡಾ.ಕೆ.ಎ. ಬಾಬು, ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಡಾ.ಬಿ.ಕೆ. ಮಂಜುನಾಥ್, ಐಕ್ಯೂಎಸಿ ಸಂಚಾಲಕ ಡಾ.ಎಚ್.ಪಿ. ಅನಂತನಾಗ್, ಆಕಾಶ್ ಇತರರಿದ್ದರು.