ಮುಖ್ಯಸಚೇತಕ ಸಲೀಂ ಅಹ್ಮದ ಹೇಳಿಕೆ,  ಇಡಿ ವಿಚಾರದಲ್ಲಿ ಬಿಜೆಪಿಗೆ ಕಪಾಳಮೋಕ್ಷ

IMG_20250724_200914_111-1.jpg
Published on

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕರನ್ನು ಹಣಿಯಲು ಇಡಿ, ಸಿಬಿಐ ಸೇರಿದಂತೆ ಕೇಂದ್ರದ ಹಲವು ಸಂಸ್ಥೆಗಳನ್ನು ಬಿಜೆಪಿ ಸರ್ಕಾರವು ದುರ್ಬಳಕೆ ಮಾಡುತ್ತಿದೆ ಎಂದು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಹೇಳುತ್ತ ಬಂದಿದೆ. ಇದೀಗ ಸುಪ್ರೀಂ ಕೋರ್ಟ್ ಇಡಿಗೆ ತಪರಾಕಿ ಹಾಕಿರುವುದು ಇವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂಲಕ ನ್ಯಾಯಾಲಯವು ಸ್ಪಷ್ಟ ಸಂದೇಶವನ್ನು ಕೊಟ್ಟಿದೆ. ರಾಜಕೀಯ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡಿಕೊಳ್ಳಿ, ಹೀಗೆ ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಬೇಡಿ ಎಂದು ಹೇಳಿದೆ. ಬಿಜೆಪಿ ಮುಖಂಡರ ಮನೆ ಮೇಲೆ ಇಡಿ ದಾಳಿ ಏಕೆ ಆಗಿಲ್ಲ. ವಿರೋಧ ಪಕ್ಷವೇ ಇವರ ಟಾರ್ಗೆಟ್ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಇದು ಸಬ್ ಕಾ ವಿನಾಶ ಸರ್ಕಾರ ಎಂದು ಜರಿದರು.

ಮಹದಾಯಿ ನೀರನ್ನು ಕೊಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳುತ್ತಾರೆ ಎಂದರೆ ಇದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಗೊತ್ತಿಲ್ಲದೇ ಇರುತ್ತದೆಯೇ? ಮಹದಾಯಿಗೆ ಕ್ಲಿಯರನ್ಸ್ ಕೊಡಿಸಿ ಯೋಜನೆ ಜಾರಿ ಮಾಡಿ ವಿಜಯೋತ್ಸವಕ್ಕೆ ಕಾಂಗ್ರೆಸ್ ನವರನ್ನು ಕರೆಯುತ್ತೇವೆ ಎಂದು ಹೇಳಿದ್ದರು. ಎಲ್ಲಿದೆ ಕ್ಲಿಯರನ್ಸ್? ಬಿಜೆಪಿಯವರಿಗೆ ಅದರಲ್ಲೂ ಕೇಂದ್ರದಲ್ಲಿ ಪ್ರಭಾವಿ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕ್ಲಿಯರನ್ಸ್ ಕೊಡಿಸುವ ಯೋಗ್ಯತೆ, ಶಕ್ತಿ ಯಾವುದೂ ಇಲ್ಲ ಎಂದರು.

ಮಹದಾಯಿ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತಬೇಕು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಗೋವಾ ಸಿಎಂ ಹೇಳಿಕೆ ಖಂಡಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡಲು ಆಗುತ್ತಿಲ್ಲ. ರಾಜ್ಯದ ತೆರಿಗೆ ಪಾಲು ಕೊಡಿ ಎಂದರೆ ನ್ಯಾಯ ಕೊಡುವ ಕೆಲಸ ಕೇಂದ್ರದಿಂದ ಆಗುತ್ತಿಲ್ಲ. ಎಲ್ಲ ರಂಗಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಜನರು ಭ್ರಮನಿರಸನಗೊಂಡಿದ್ದಾರೆ. ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಸಲೀಂ ಹೇಳಿದರು.

ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಳ್ಳ ವೋಟಿಂಗ್ ಆಗಿರುವ ಬಗ್ಗೆ ಸರ್ವೇ ಟೀಂ ಹೇಳಿದೆ. ಬಿಜೆಪಿಗೆ ಜಾಸ್ತಿ ಮತ ಬರುವಂತೆ ಮಾಡಲಾಗಿದೆ. ಮುಂಬರುವ ಬಿಹಾರ ಚುನಾವಣೆಯಲ್ಲಿಯೂ ಇಂತಹ ತಂತ್ರ ಮಾಡುವ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೊರಟಿದೆ. ಇದರ ಬಗ್ಗೆ ಚರ್ಚೆ ಆಗಲಿ ಎಂದು ಹೇಳಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net