ಸೆಣಬಿನಕುಪ್ಪೆ ಸರ್ಕಾರಿ ಶಾಲೆ 5ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ

school SALIGRAMA
Published on

 ಸಾಲಿಗ್ರಾಮ: ಖಾಸಗಿ ಶಾಲೆಗಳ ಅಬ್ಬರದ ನಡುವೆಯೂ ಸರ್ಕಾರಿ ಶಾಲಾ ಮಕ್ಕಳ ಸಮಗ್ರ ಪ್ರಗತಿ ಇತ್ತೀಚಿನ ದಿನಗಳಲ್ಲಿ ಶ್ಲಾಘನೀಯವಾಗಿದೆ ಎಂದು ಪಿಡಿಒ ಪ್ರತಾಪ್ ಹೇಳಿದರು. ಸೆಣಬಿನಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 5ನೇ ತರಗತಿ ಮಕ್ಕಳಿಗೆ ಬೀಳ್ಕೊಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಿಕೆ ನಿಜಕ್ಕೂ ಜನರ ಗಮನ ಸೆಳೆದಿರುವುದು ನಿಜ ಶಾಲೆಯಲ್ಲಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸಿಕೊಡಲು ನಾವು ಕೂಡ ಸಿದ್ದರಿದ್ದೇವೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಮತ್ತು ಶಿಕ್ಷಕರ ಕೋರಿಕೆ ಮೇರೆಗೆ ಅಡುಗೆ ಮನೆ ಕೊಠಡಿಯನ್ನ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಂದ್ರೆಕೊಪ್ಪಲು ರವಿಕುಮಾರ ಮಾತನಾಡಿ, ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯಲ್ಲೇ ನುರಿತ ಶಿಕ್ಷಕ ಸಮುದಾಯವಿದೆ. ಈ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಗ್ರಾಮದಲ್ಲಿ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಶಾಲೆಯತ್ತ ಸಮುದಾಯ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಒಂದನೇ ತರಗತಿ ಮಕ್ಕಳ ದಾಖಲಾತಿ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು. ಈ ಗ್ರಾಮದ ಜನರೇ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.

ಮುಖ್ಯ ಶಿಕ್ಷಕ ಜಯರಾಮ ನಾಯಕ, ಸಹ ಶಿಕ್ಷಕಿ ಲೋಕೇಶ್ವರಿ ಅವರ ಬೋಧನೆ ಶೈಲಿ ಮತ್ತು ಪಾಲಕರೊಂದಿಗೆ ಹೊಂದಿರುವ ಬಾಂಧವ್ಯ ಉತ್ತಮವಾಗಿದೆ. ಇದು ಸರ್ಕಾರಿ ಶಾಲಾ ಅಭಿವೃದ್ಧಿಗೂ ಪೂರಕವಾಗಿದೆ. ಇಲ್ಲಿನ ಮಕ್ಕಳು ಯಾವುದೇ ಖಾಸಗಿ ಶಾಲೆಗೆ ಸವಾಲು ಹಾಕುವ ರೀತಿಯಲ್ಲಿ ವಿದ್ಯಾಭ್ಯಾಸದ ಪ್ರಗತಿ ತೋರಿಸಿದ್ದಾರೆ. ಇದು ಗ್ರಾಮಕ್ಕೆ ಹೆಮ್ಮೆ ಎಂದು ಅವರು ಶ್ಲಾಘಿಸಿದರು. ಉತ್ತಮ ಶಿಕ್ಷಕರನ್ನು ಇದೇ ಶಾಲೆಯಲ್ಲಿ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ ಮಾತನಾಡಿ, ನಮ್ಮೂರಿನಿಂದ ಯಾವುದೇ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸದಂತೆ ನೋಡಿಕೊಂಡು ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಳ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಅಕ್ಕ-ಪಕ್ಕ ಗ್ರಾಮಗಳಿಂದ ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಗೆ ದಾಖಲು ಮಾಡಿಸಿಕೊಳ್ಳಬೇಕು. ಇದನ್ನು ಈ ವರ್ಷ ಸವಾಲಾಗಿ ಸ್ವೀಕರಿಸೋಣ. 1ರಿಂದ 5ನೇ ತರಗತಿವರೆಗೆ ಉತ್ತಮ ಶಿಕ್ಷಣ ಕೊಡಿಸಿದರೆ ನಮ್ಮ ಮಕ್ಕಳ ಭವಿಷ್ಯದ ಬುನಾದಿಯನ್ನು ನಾವು ರೂಪಿಸಿದಂತಾಗುತ್ತದೆ ಎಂದು ಅವರು ಪಾಲಕರಿಗೆ ಕಿವಿಮಾತು ಹೇಳಿದರು.

ಸಿಆರ್‌ಪಿ ಮಹೇಶ್, ಸಹ ಶಿಕ್ಷಕಿ ಎಂ. ಕೆ.ಲೋಕೇಶ್ವರಿ, ಎಸ್‌ಡಿಎಂಸಿ ನಿರ್ದೇಶಕರಾದ ರಾಮಚಂದ್ರ, ರಾಜೇಗೌಡ, ಶ್ರೀನಿಧಿ, ಶಿವರಾಜ, ಮಹದೇವ, ಪೂಜಾ, ದಿನೇಶ, ಪವಿತ್ರಾ, ಸುಜಾತಾ, ಸೆಣಬಿನಕುಪ್ಪೆ ಮತ್ತು ಸಾಲುಕೊಪ್ಪಲು ಗ್ರಾಮಸ್ಥರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net