ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳ ಇಂದು ಬ್ರಹ್ಮರಥೋತ್ಸವ

jaathre
Published on

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ವಾರ್ಷಿಕ ಬ್ರಹ್ಮ ರಥೋತ್ಸವ ಜ.16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ. 17ರಂದು ಓಕುಳಿ ಸೇವೆ, ಓಲಗ ಧ್ವಜಾರೋಹಣ, ಇನ್ನಿತರ ಧಾರ್ಮಿಕ ಕಾರ್ಯಕ್ರಗಳು ನಡೆಯಲಿವೆ.

ದಕ್ಷಿಣ ಭಾರತದ ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಸಾಲಿಗ್ರಾಮ ಶ್ರೀಗುರುನರಸಿಂಹ ಕ್ಷೇತ್ರವೂ ಒಂದಾಗಿದೆ. ಯೋಗಾನಂದ ಶ್ರೀ ಗುರುನರಸಿಂಹನೆಂದು ಕರೆಯಲ್ಪಡುತ್ತಿರುವ ಇಲ್ಲಿನ ಶ್ರೀದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು, ಆದಿಯಲ್ಲಿ ಶ್ರೀಮಹಾಗಣಪತಿ ಯಂತ್ರ ಸ್ಥಾಪಿಸಿ ಅದರ ಮೇಲೆ ಕಮಲಪತ್ರದ ಮೇಲೆ ನರಸಿಂಹ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವರ ವಿಗ್ರಹವು ಅರ್ಧಯೋಗ ಪಟ್ಟಾನ್ವಿತವಾಗಿದ್ದು ಇದನ್ನು ಯೋಗನರಸಿಂಹನೆಂದು ಲಕ್ಷ್ಮಿಯು ಹೃದಯ ಭಾಗದಲ್ಲಿ ಅಂತರ್ಗತವಾಗಿರುವುದರಿಂದ ಶ್ರೀಲಕ್ಷ್ಮಿನರಸಿಂಹನೆಂದು ಕರೆಯುತ್ತಾರೆ. ಸ್ವಯಂ ವ್ಯಕ್ತವಾದ ಮಹಾವಿಷ್ಣುವಿನ ಅಷ್ಟಕ್ಷೇತ್ರಗಳಲ್ಲಿ ಇದು ಒಂದಾಗಿದ್ದು ದೇವರ ವಿಗ್ರಹವು ಎಂಟನೇ ಶತಮಾನದ್ದಾಗಿರಬಹುದೆಂದು ಗುರುತಿಸಲಾಗಿದೆೆ. ಲಭ್ಯವಿರುವ ಸ್ಕಂದ ಪುರಾಣ, ಪದ್ಮಪುರಾಣ ಲೋಕಾಧಿತ್ಯ ಪದ್ಧತಿಗಳಲ್ಲಿ ಈ ದೇವಳದ ಕುರಿತು ಮಾಹಿತಿ ಇದೆ. ಸಾಲಿಗ್ರಾಮ ಶಿಲೆಯಿಂದ ರಚಿಸಲ್ಪಟ್ಟ ದೇವರ ಮೂರ್ತಿಯಿಂದಾಗಿ ಈ ಪ್ರದೇಶವು ಸಾಲಿಗ್ರಾಮ ಎಂದು ಪ್ರಸಿದ್ಧವಾಗಿದೆ.

ಹಿಂದೆ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು, ಆಗ ನರಸಿಂಹನ ಉಗ್ರತೆಯಿಂದ ಪೂರ್ವದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು, ಇದರಿಂದ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಅಂದರೆ ಅರಬ್ಬಿ ಸಮುದ್ರದ ಕಡೆ ಮುಖ ಮಾಡಿ ಸ್ಥಾಪಿಸಲಾಯಿತು. ಪಶ್ಚಿಮಬದಿಯ ಕೃಷಿಯ ಹಾನಿಯನ್ನು ತಪ್ಪಿಸಲು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ನೇರವಾಗಿ ಎದುರಿನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವ ಇತಿಹಾಸವಿದೆ. ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಲೇಪಿಸಲಾಗುತ್ತಿದೆ. ಅಂದು ಸ್ಥಾಪಿಸಿದ ನಂದಾದೀಪಗಳಲ್ಲಿ ನಿರಂತರವಾಗಿ ದೀಪವು ಉರಿಯುತ್ತಿದ್ದು, ದೂರ ಪ್ರಯಾಣ ಬೆಳೆಸುವರು ಸುಖಪ್ರಯಾಣಕ್ಕಾಗಿ ಮತ್ತು ಭಕ್ತರು ಎಣ್ಣೆಯನ್ನು ನಂದಾದೀಪಕ್ಕೆ ಹರಕೆರೂಪದಲ್ಲಿ ಸಲ್ಲಿಸಿ ಪ್ರಾರ್ಥಿಸುತ್ತಾರೆ. ಇಷ್ಟಾರ್ಥ ಪ್ರಾಪ್ತಿಗಾಗಿ ಪೂರ್ಣಾಲಂಕಾರ, ರಂಗಪೂಜೆ, ಸುಂದರಕಾಂಡ ಪಾರಾಯಣ ಸಲ್ಲಿಸುತ್ತಾರೆ.

ನರಸಿಂಹ ದೇವರೇ ಗುರು: ಸಮಾಜದ ಎಲ್ಲ ವರ್ಗದ ಜನರು ತಮ್ಮದೇ ಆದ ಒಂದು ಗುರುಮಠ, ಪೀಠಾಧಿಪತಿಗಳನ್ನು ಹೊಂದಿರುವುದು ಸಾಮಾನ್ಯ. ಆದರೆ ಮೂಲತಃ ಕೋಟ ಪ್ರದೇಶದ 14 ಗ್ರಾಮಗಳಲ್ಲಿ ವಾಸವಾಗಿದ್ದು, ಪ್ರಸ್ತುತ ಪ್ರಪಂಚದಾದ್ಯಂತ 7ರಿಂದ 8 ಲಕ್ಷ ಅಂದಾಜು ಸಂಖ್ಯಾ ಬಾಹುಳ್ಯ ಹೊಂದಿರುವ ಕೋಟ ಬ್ರಾಹ್ಮಣರೆಂಬ ಪಂಗಡದವರು ಶ್ರೀಗುರುನರಸಿಂಹ ದೇವಸ್ಥಾನವನ್ನು ತಮ್ಮ ಗುರುಮಠವೆಂದು, ಇಲ್ಲಿನ ಪ್ರಧಾನ ದೇವರಾದ ಶ್ರೀನರಸಿಂಹನನ್ನೇ ಗುರುವಾಗಿ ಸ್ವೀಕರಿಸಿರುವ ಕಾರಣ ಗುರುನರಸಿಂಹ ಎಂದು ಖ್ಯಾತಿ ಪಡೆದಿದೆ. ಕೋಟೇಶ್ವರ ಮಾಗಣೆಯವರು ಗುರುನರಸಿಂಹ ದೇವರನ್ನು ಕುಲದೇವರಾಗಿ ಆರಾಧಿಸಿಕೊಂಡು ಬಂದಿದ್ದು, ಕೋಟ 14 ಗ್ರಾಮಗಳಾದ ಬಾಳ್ಕುದ್ರು, ಐರೋಡಿ, ಪಾಂಡೇಶ್ವರ, ಮೂಡಹಡು, ಗುಂಡ್ಮಿ, ಕೋಡಿ, ಕಾರ್ಕಡ, ಪಾರಂಪಳ್ಳಿ, ಚಿತ್ರಪಾಡಿ, ಕೋಟತಟ್ಟು, ಕಾರ್ತಟ್ಟು, ಹಂದಟ್ಟು, ಗಿಳಿಯಾರು, ಮಣೂರು ಗ್ರಾಮಗಳ ಅಧಿದೇವತೆಯಾಗಿ ಪ್ರತಿಯೊಬ್ಬರು ಆರಾಧಿಸುತ್ತಾರೆ.

ಗೋದಾವರಿ ತೀರದವರು: ಕೋಟ ಬ್ರಾಹ್ಮಣರು ಉತ್ತರ ಭಾರತದಿಂದ (ಗೋದಾವರಿ ತೀರ) ಯಜ್ಞ ಯಾಗಗಳನ್ನು ದೇವತಾ ಕೆಲಸಗಳನ್ನು ನಿರ್ವಹಿಸಲೆಂದು ಮಯೂರ ವರ್ಮನ ರಾಜನ ಕೋರಿಕೆಯಂತೆ ಭಟ್ಟಾಚಾರ್ಯರೆಂಬ ವಿದ್ವಾಂಸರು ಕರೆ ತಂದರೆಂಬ ಐತಿಹಾಸವಿದೆ. ಇದೇ ಸಮಯದಲ್ಲಿ ನಾರದ ಮಹರ್ಷಿಗಳಿಂದ ಪ್ರತಿಷ್ಠಾಪಿಸಲಾಗಿತ್ತೆಂದು ಹೇಳಲಾದ ಅಶ್ವತ್ಥ ಮರದ ಪೊಟರೆಯಲ್ಲಿದ್ದ ನರಸಿಂಹ ವಿಗ್ರಹವನ್ನು ಭಟ್ಟಾಚಾರ್ಯರರು ಗಣಪತಿ ಯಂತ್ರದ ಮೇಲೆ ಪ್ರತಿಷ್ಠಾಪಿಸಿ ಉತ್ತರದಿಂದ ಕರೆತಂದ ವೈದಿಕ ಪರಂಪರೆಯ ಕೋಟ ಬ್ರಾಹ್ಮಣರನ್ನು ಪೂಜಾ ಕೈಂಕರ್ಯಕ್ಕೆ ನೇಮಿಸಿದರೆಂದು ತಿಳಿದು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net