

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆಯಲ್ಲಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ಜರುಗಿತು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅವರು ಹಿರಿಯ ದಂಪತಿ ಪಿ.ಗಂಗಾಧರ ಹೇರ್ಳೆ ಮತ್ತು ಜಾಹ್ನವಿ ಪಿ.ಹೇರ್ಳೆ ಹಾಗೂ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮತ್ತು ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಿದರು. ಯಕ್ಷಗಾನ ಕಲಾ ಅಕಾಡೆಮಿ ಪುಸ್ತಕ ಪ್ರಶಸ್ತಿ ಪುರಸ್ಕೃತ ಎಚ್.ಸುಜಯೀಂದ್ರ ಹಂದೆ, ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಫೆಲೋಶಿಪ್ ಪುರಸ್ಕೃತ ಎಚ್.ಸುದರ್ಶನ ಉರಾಳ, ಸಮಾಜ ಸೇವಕ ಕೆ.ತಾರಾನಾಥ ಹೊಳ್ಳ, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರಾಗಿ ಆಯ್ಕೆಯಾದ ಪ್ರಗತಿಪರ ಕೃಷಿಕ ಕೆ.ಶಿವಮೂರ್ತಿ ಅವರನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ ಮಂಜ ಸನ್ಮಾನಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಪ್ರಸನ್ನ ಕುಮಾರ್ ಹಾಗೂ ಚೇತನಾ ಪ್ರೌಢಶಾಲೆ ವಿದ್ಯಾರ್ಥಿನಿ ವೈಷ್ಣವಿ ಅಲ್ಸೆ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಕಾರ್ಕಡ, ವಡ್ಡರ್ಸೆ ಗ್ರಾಮದ ತಲಾ ಇಬ್ಬರು, ಕೋಟತಟ್ಟು ಗ್ರಾಮದ ಓರ್ವ ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಭಟ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ವಲಯದ ವ್ಯಾಪ್ತಿಯಲ್ಲಿ ಪ.ಪೂ., ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿಪ್ರ ಸಮಾಜದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಾಲಿಗ್ರಾಮ ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನಿತಾ ಉಪಾಧ್ಯ ಇದ್ದರು. ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರ್ಳೆ ವಿದ್ಯಾರ್ಥಿ ವೇತನ ವಿವರ ನೀಡಿದರು. ಶುಭಾ ಅಡಿಗ ಮತ್ತು ಲಕ್ಷ್ಮೀ ನಾರಾಯಣ ಅಡಿಗ, ಕೃಷ್ಣ ಪ್ರಸಾದ ಹೇರ್ಳೆ, ಬಿ.ಜಿ.ಸತೀಶ ಉಡುಪ, ನಾಗರಾಜ ಉಪಾಧ್ಯ, ಸುಬ್ರಾಯ ಮಯ್ಯ, ವಿಶ್ವನಾಥ ಹೇರ್ಳೆ, ಪಿ.ಸಿ.ಹೊಳ್ಳ ಪಾಂಡೇಶ್ವರ, ಸುಬ್ರಾಯ ಉರಾಳ, ನಾಗರಾಜ ಮಧ್ಯಸ್ಥ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ನಿರೂಪಿಸಿದರು.