ಸಾಲೆತ್ತೂರಿನ ಮನೆಯಲ್ಲಿ ಕಳ್ಳತನ

PTR_6 AUG_6
Published on

ವಿಟ್ಲ: ಸಾಲೆತ್ತೂರಿನ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯ ಕಳ್ಳರು ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ.


ಸಾಲೆತ್ತೂರು ನಿವಾಸಿ ಜಗನ್ನಾಥ್ ವಿದೇಶದಲ್ಲಿದ್ದು, ಮನೆಯಲ್ಲಿ ಪತ್ನಿ ವಿಜಯಾ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದಾರೆ. ಆ.೩ರಂದು ವಿಜಯ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತವರು ಮನೆಗೆ ತೆರಳಿದ್ದು, ಆ.೪ರಂದು ವಾಪಸ್ ಮನೆಗೆ ಬರುವಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.


೪ ಗ್ರಾಂ ಚಿನ್ನ ಹಾಗೂ ೬ ಸಾವಿರ ರೂ. ಕಳ್ಳತನ ಮಾಡಿದ್ದಾರೆ. ವಿದೇಶಿ ನೋಟುಗಳು ಹಾಗೂ ನಾಣ್ಯಗಳಿದ್ದ ಡಬ್ಬವನ್ನು ಕದ್ದೊಯ್ದಿದ್ದಾರೆ. ವಿಜಯ ಅವರ ಪುತ್ರಿಯ ಶಾಲಾ ಬ್ಯಾಗ್‌ನಲ್ಲಿದ್ದ ಪುಸ್ತಕವನ್ನು ಎಸೆದು ಬ್ಯಾಗ್ ಕೊಂಡೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕೃತ್ಯಕ್ಕೆ ಬಳಸಿದ ಕೆಲವು ಸೊತ್ತುಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದು, ತ್ವರಿತವಾಗಿ ತನಿಖೆ ನಡೆಸಬೇಕಾದ ಇಲಾಖೆ ಹೊಸ ಕಾಯ್ದೆ ಪ್ರಕಾರ ನ್ಯಾಯಾಲಯದ ಅನುಮತಿ ಇಲ್ಲದೆ ಕಳ್ಳತನ ಪ್ರಕರಣ ದಾಖಲಿಸಿಕೊಳ್ಳುವುದು ಕಷ್ಟ ಎಂದು ಆರಂಭದಲ್ಲಿ ಜಾರಿಕೊಳ್ಳುವ ಕೆಲಸ ಮಾಡಿದೆ. ಮನೆಯಲ್ಲಿ ಸಾಕಿದ್ದ ಎರಡು ಶ್ವಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದ್ದು, ಕಳ್ಳರು ಕೊಂದು ಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net