

ಮಂಗಳೂರು: ಮುಖ್ಯಮಂತ್ರಿ ಬದಲಾವಣೆ ಸಲ್ಲದು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ.ಬಿ.ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ ನೀಡಿರುವುದು ಅವರ ವೈಯುಕ್ತಿಕ ಹೇಳಿಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ.
ಮೇಲಿನ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ.ಯಸ್.ಯಡಿಯೂರಪ್ಪ ಅವರು ಅತ್ಯಂತ ವಿಫಲ ಮುಖ್ಯಮಂತ್ರಿ. ಈಗ ರಾಜ್ಯದಲ್ಲಿ ಇರುವುದು ಅಯೋಗ್ಯರ ಸರ್ಕಾರ ಎಂದು ಅವರು ಆರೋಪಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಜುಲೈ 22 ರಂದು ಸಾಯಂಕಾಲ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಅಲ್ಲಿ ಸಭೆ ನಡೆಸುವರು. ಜುಲೈ 23 ರಂದು ಅವರು ಮಂಗಳೂರಿನಲ್ಲಿ ನಡೆಯುವ ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪಕ್ಷ ಸಂಘಟನೆ ಸಭೆಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಅಭಯಚಂದ್ರ ಜೈನ್ ಮುಂತಾದವರು ಉಪಸ್ಥಿತರಿದ್ದರು.