ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ

19-KGL_1,,
Published on

ಕೊಳ್ಳೇಗಾಲ: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಇದೊಂದು ದೊಡ್ಡ ಬ್ಲ್ಯಾಕ್ ಮಾರ್ಕೆಟ್ ಜಾಲವಾಗಿ ಕಾರ್ಯನಿರ್ವಹಿಸಿದ್ದು, ದಂಧೆಯಾಗಿ ಮಾರ್ಪಾಟ್ಟಿದೆ.

ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಾಗ್ಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುವವರು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಿದವರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸುತ್ತಿದ್ದರೂ ದಂಧೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಧುವನಹಳ್ಳಿ ಗ್ರಾಮದಲ್ಲಿ ಜ.1ರಂದು ಪೊಲೀಸರು ದಾಳಿ ನಡೆಸಿ 420 ಕೆ.ಜಿ. ಅಕ್ಕಿ ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದರು. ಜ.26ರಂದು ಚಿಕ್ಕಿಂದುವಾಡಿ ಬಳಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 3,530 ಕೆ.ಜಿ. ಪಡಿತರ ಅಕ್ಕಿ ಜಪ್ತಿ ಮಾಡಲಾಗಿತ್ತು. ಜ.28ರಂದು ಮಧುವನಹಳ್ಳಿ ಗ್ರಾಮದಲ್ಲಿ 406 ಕೆಜಿ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಫೆ.8ರಂದು ನರೀಪುರ ಕ್ರಾಸ್ ಬಳಿ ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ 760 ಕೆಜಿ ಪಡಿತರ ಅಕ್ಕಿ, ಮಾ.21 ರಂದು ಹರಳೆ ಗ್ರಾಮದ ಬಳಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 3,021 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿತ್ತು.

ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ಪೊಲೀಸರು 2024ರ ಜ.13ರಂದು ಪಟ್ಟಣದ ಕಾವೇರಿ ರಸ್ತೆ ನಾಯಕರ ಬೀದಿ ಬಳಿ ಆಟೋದಲ್ಲಿ ಸಾಗಿಸುತ್ತಿದ್ದ 332 ಕೆಜಿ ಪಡಿತರ ಅಕ್ಕಿ ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದರು. 2025ರ ಜ.25ರಂದು ನಾಯಕರ ಬೀದಿ ಬಳಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಒಬ್ಬನನ್ನು ಬಂಧಿಸಿ 600 ಕೆಜಿ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಮಾ.13 ರಂದು ಹೊಸ ಹಂಪಾಪುರ ಬೈಪಾಸ್‌ನಲ್ಲಿ 427 ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಲಾಗಿತ್ತು.

ದಂಧೆಕೋರರಿಗೆ ಹಣ ಗಳಿಸುವ ಮಾರ್ಗ

ಹೀಗಿದ್ದರೂ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ಮಾತ್ರ ಇನ್ನೂ ನಿಂತಿಲ್ಲ. ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಬಡವರಿಗೆ ನೀಡುವ ಅಕ್ಕಿ ದಂಧೆಕೋರರಿಗೆ ಹಣಗಳಿಸುವ ಮಾರ್ಗವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಬಡಾವಣೆಯಲ್ಲಿ ಸ್ಕೂಟರ್, ಆಟೋಗಳಲ್ಲಿ ಬರುವ ಧಂಧೆಕೋರರು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಸಾಗಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.

ಅಲ್ಲೊಂದು, ಇಲ್ಲೊಂದು ಪ್ರಕರಣಗಳ ಮೇಲೆ ದಾಳಿ ನಡೆಸುವ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಂಧೆಕೋರರನ್ನು ವಶಕ್ಕೆ ಪಡೆದು ಕಾನೂನು ಕ್ರಮವಹಿಸುತ್ತಿದ್ದಾರೆ. ಹಾಡಹಗಲೇ ನಡೆಯುವ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರ್ಕಾರದ ಪಡಿತರ ದಾಸ್ತಾನಿಗೆ ಕನ್ನ

ಪಡಿತರ ಅಕ್ರಮ ಮಾರಾಟ ದಂಧೆಯಲ್ಲಿ ಲಕ್ಷಾಂತರ ರೂ. ಸಂಪಾದನೆ ಆಗಲಿದೆ. ಇದರ ರುಚಿ ಕಂಡವರು ಫೆ.26 ರಂದು ರಾತ್ರಿ ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ಕರ್ನಾಟಕ ಆಹಾರ ನಿಗಮ ನಿಯಮಿತ ಕೊಳ್ಳೇಗಾಲ ತಾಲೂಕು ಸಗಟು ಮಳಿಗೆಯಲ್ಲಿ ದಾಸ್ತಾನಿಗೆ ಕನ್ನ ಹಾಕಿದ್ದರು. ರಾತ್ರೋರಾತ್ರಿ ಮಳಿಗೆ ಶೆಟರ್ ಜಖಂಗೊಳಿಸಿ 190 ಚೀಲದಲ್ಲಿದ್ದ ಬರೋಬ್ಬರಿ 6,900 ಕೆಜಿ ಅಕ್ಕಿ ಕಳವು ಮಾಡಿದ್ದರು. ಕೆಲವು ದಿನಗಳ ಬಳಿಕ ಕೊಳ್ಳೇಗಾಲ ಪೊಲೀಸರು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದರು. ಕಳವಾಗಿದ್ದ ಅಕ್ಕಿಯನ್ನು ಜಪ್ತಿ ಮಾಡಿದ್ದರು.

ಹೊರ ಜಿಲ್ಲೆಗಳಿಗೆ ರಫ್ತು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಮನೆಗೆ ತೆರಳುವ ಕೆಲವರು ಬೈಕ್‌ಗಳಲ್ಲಿ ತೆರಳಿ ಹಣಕ್ಕೆ ಅಕ್ಕಿ ಖರೀದಿ ಮಾಡಿ ತೆರಳುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ಅದನ್ನು ಡೀಲರ್ಸ್ ಗೂಡ್ಸ್ ವಾಹನಗಳಲ್ಲಿ ಮಂಡ್ಯ, ಬನ್ನೂರು, ಮಳ್ಳವಳಿ ಕಡೆಗೆ ಸಾಗಿಸುತ್ತಾರೆ ಎಂಬ ದೂರು ಕೇಳಿ ಬರುತ್ತಿವೆ. ಡೀಲರ್ಸ್ ಾಜಕೀಯ ಹಿನ್ನೆಲೆಯುಳ್ಳ ಪ್ರಭಾವಿಗಳ ಒಡನಾ ಟದಲ್ಲಿರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಹಳ್ಳಿಗಳಲ್ಲಿ ಪಡಿತರ ಅಕ್ರಮ ಮಾರಾಟ ನಡೆಯುತ್ತಿದೆ. ದಂಧೆಯಲ್ಲಿ ಸಿಕ್ಕಿಬಿದ್ದವರು ಜಾಮೀನು ಪಡೆದು ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ರೂ.ಗಳನ್ನು ಸುಲಭವಾಗಿ ಗಳಿಸುತ್ತಿದ್ದಾರೆ. ಪೊಲೀಸರು ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ಮಾರಾಟಕ್ಕೆ ಕೊಡುವವರ ರೇಷನ್ ಕಾರ್ಡ್ ರದ್ದುಗೊಳಿಸಬೇಕು. ಗೌಡೇಗೌಡ ಜಿಲ್ಲಾ ಉಪಾಧ್ಯಕ್ಷ, ರೈತ ಸಂಘ ಅಕ್ರಮವಾಗಿ ಪಡಿತರ ಸಾಗಣೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ನಿರಂತರವಾಗಿ ದಾಳಿ ನಡೆಸಿ ಕ್ರಮವಹಿಸುತ್ತಿದೆ. ದಂಧೆ ಬಗ್ಗೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಲಿ, ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಎಂ.ಧರ್ಮೇಂದ್ರ ಡಿವೈಎಸ್ಪಿ, ಕೊಳ್ಳೇಗಾಲ ಉಪವಿಭಾಗ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಪಡಿತರ ಸಾಗಿಸುವವರ ಮೇಲೆ ಇಲಾಖೆ ನಿಗಾವಹಿಸಿದೆ. ಪೊಲೀಸ್ ಇಲಾಖೆ ಜತೆಗೂಡಿ ದಾಳಿಗಳನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿದ್ದೇವೆ. ಸರ್ಕಾರ ಬಡವರಿಗಾಗಿ ನೀಡುವ ಅಕ್ಕಿಯನ್ನು ದುರುಪಯೋಗ ಪಡಿಸಿ ಕೊಳ್ಳುವಾಗ ಸಿಲುಕಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರಸಾದ್, ಆಹಾರ ನಿರೀಕ್ಷಕ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net