

ಶಿರಸಿ: ಮಳೆಗಾಲದ ದಿನಗಳು ಆರಂಭಗೊಂಡರೆ ಮಹಿಳೆಯರಿಗೆ ಮನೆಯಂಗಳದಲ್ಲಿ ವಿವಿಧ ತರಕಾರಿ ಬೆಳೆಯುವ ತವಕ ಆರಂಭಗೊಳ್ಳುತ್ತದೆ. ತಮ್ಮಲ್ಲಿರದ ಹೂವಿನ ಗಿಡಗಳನ್ನು ಎಲ್ಲಿಂದಾದರೂ ತಂದು ನೆಟ್ಟು ಬೆಳೆಸುವ ಆಸಕ್ತಿ ಹೆಚ್ಚುತ್ತದೆ. ಅಪರೂಪದ ತರಕಾರಿ ಬೀಜಗಳು, ಹೂವಿನ ಗಿಡಗಳ ಕೊಡು ಕೊಳ್ಳುವಿಕೆಯ ಸಂಗಮ ನಗರದಲ್ಲಿ ಶುಕ್ರವಾರ ನಡೆಯಿತು.
ನೆಲಸಿರಿ ಆರ್ಗ್ಯಾನಿಕ್ ಹಬ್ ನಲ್ಲಿ ಉತ್ತರ ಕನ್ನಡ ಸಾವಯವ ಒಕ್ಕೂಟ, ನೆಲಸಿರಿ ಆರ್ಗಾನಿಕ್ ಹಬ್ ಮತ್ತು ವನಸ್ತ್ರೀ ಸಂಸ್ಥೆ ಹಮ್ಮಿಕೊಂಡಿದ್ದ ಬೀಜ ಮೇಳ ಮತ್ತು ಮಲೆನಾಡು ಮೇಳದಲ್ಲಿ ತಾಲೂಕು ಮತ್ತು ಹೊರ ತಾಲೂಕಿನಿಂದಲೂ ಆಗಮಿಸಿದ್ದ ಮಹಿಳೆಯರು ಡೇರೆ, ಸೇವಂತಿಗೆ, ವಿವಿಧ ವಿನೂತನ ತಳಿಯ ಹೂವಿನ ಗಿಡಗಳನ್ನು ಮಾರಾಟಕ್ಕೆ ತಂದಿದ್ದರು.
ಅಪರೂಪದ ಮರ ಬೆಂಡೆ, ಗುಣಮಟ್ಟದ ತರಕಾರಿ ಬೀಜಗಳನ್ನೂ ನೂರಾರು ಮಹಿಳೆಯರು ಖರೀದಿಸಿದರು. ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಬೀಜ ಸಂರಕ್ಷಕ ಆರ್.ಜಿ. ಭಟ್ ದೇವತೆಮನೆ, ಪ್ರತಿಯೊಬ್ಬನ ಜೀವನದಲ್ಲಿಯೂ ಆರೋಗ್ಯ ಅತ್ಯವಶ್ಯ. ಆರೋಗ್ಯ ಸುಧಾರಿಸಲು ಸಾವಯವ ಆಹಾರವನ್ನೇ ಹೆಚ್ಚು ಸೇವಿಸಬೇಕು. ಇಂದು ಪ್ರತಿ ಬೆಳೆಯಲ್ಲೂ ರಾಸಾಯನಿಕ ಬಳಕೆ ಅಗಾಧವಾಗಿ ಹೆಚ್ಚಿದೆ. ಶೇ. 95 ರಷ್ಟು ಆಹಾರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಾವು ರಾಸಾಯನಿಕ ಸೇವಿಸುತ್ತಿದ್ದೇವೆ. ಆಹಾರ ಉತ್ಪಾದನೆಯಲ್ಲಿಯೂ ಸಾವಯವ ಪದ್ಧತಿಗೆ ಆದ್ಯತೆ ನೀಡಿ ಮುಂದಿನ ತಲೆಮಾರಿಗೆ ಆರೋಗ್ಯ ವಂತ ಸಮಾಜವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಮಹಿಳೆಯರು ತರಕಾರಿ ಬೀಜಗಳನ್ನು ಸಂಗ್ರಹಿಸಿ ಬೇಳೆಯುವ ಕೆಲಸ ಮಾಡಬೇಕು. ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿಯನ್ನಾದರೂ ಬೆಳೆದು ಕೊಳ್ಳಬೇಕು ಎಂದರು.
ರಾಘವ ಹೆಗಡೆ ಕೊರ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್, ಕೆವಿಕೆ ಮುಖ್ಯಸ್ಥೆ ಡಾ.ರೂಪಾ ಪಾಟೀಲ , ವನಸ್ತ್ರೀ ಟ್ರಸ್ಟ್ ನ ಟ್ರಸ್ಟಿ ಹಾಗೂ ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ಇದ್ದರು. ವನಸ್ತ್ರೀ ಸಂಸ್ಥೆಯ ಸದಸ್ಯರಾದ ಹೇಮಾ ಹೆಗಡೆ, ಸುಮನ್ ಹೆಗಡೆ, ಸಂತೋಷ ಅವರನ್ನು ಗೌರವಿಸಲಾಯಿತು.