ಸ್ವಾಧೀನಪಡಿಸಿಕೊಂಡಿದ್ದ ಜಮೀನು ಮಾರಾಟ

13HSN1
Published on

ಹಾಸನ: ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಕೆಐಎಡಿಬಿ ಮತ್ತೊಬ್ಬರಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿ, ಜಮೀನಿನ ಮೂಲ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಹೊರವಲಯದ ಬೊಮ್ಮನಾಯಕನಹಳ್ಳಿ ನಿವಾಸಿ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಜೆಸಿಬಿ ಕಾಮಗಾರಿಗೆ ಅಡ್ಡಿಪಡಿಸಿದರು. ವಿಷಯ ತಿಳಿದು ನಗರ ಠಾಣೆ ಪೊಲೀಸರು ಭೇಟಿ ನೀಡಿ ಎಲ್ಲರನ್ನೂ ಸಮಾಧಾನಪಡಿಸಿದರು.

ಹಿನ್ನೆಲೆ: ವೆಂಕಟೇಗೌಡ ಹಾಗೂ ಆತನ ಸಹೋದರರಿಗೆ ಸೇರಿದ 4 ಎಕರೆ ಜಮೀನನ್ನು 1999ರಲ್ಲಿ ರಸ್ತೆ ಮಾಡುವ ಉದ್ದೇಶದಿಂದ ಕೆಐಎಡಿಬಿ ಖರೀದಿಸಿತ್ತು. ಆದರೆ ಇಪ್ಪತ್ತು ವರ್ಷ ಕಳೆದರೂ ಅಲ್ಲಿ ರಸ್ತೆ ನಿರ್ಮಿಸದೆ ಇನ್ನೊಬ್ಬ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಾರೆ ಎಂಬುದು ಜಮೀನಿನ ಮೂಲ ಮಾಲೀಕರ ಆರೋಪ.

ರಸ್ತೆ ನಿರ್ಮಿಸದೆ ಇರುವ ಕಾರಣ ತಮ್ಮ ಜಮೀನನ್ನು ಬಿಟ್ಟುಕೊಡಬೇಕೆಂದು ಮಾಲೀಕರು ಆಗ್ರಹಿಸಿದ್ದು, ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ನಡುವೆ ಭೂಮಿ ಖರೀದಿಸಿರುವ ವ್ಯಕ್ತಿ ಬುಧವಾರ ಜೆಸಿಬಿ ಮೂಲಕ ಕೆಲಸ ಮಾಡುತ್ತಿರುವುದನ್ನು ವೆಂಕಟೇಗೌಡ ಹಾಗೂ ಕುಟುಂಬಸ್ಥರು ಪ್ರಶ್ನಿಸಿದಾಗ ಗಲಾಟೆ ಶುರುವಾಗಿದೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು ಬಂದು ಕೆಲಸ ಸ್ಥಗಿತಗೊಳಿಸಿ ಪರಿಸ್ಥಿತಿ ನಿಯಂತ್ರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net