

ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಆದಾಯ ಹೆಚ್ಚಳಕ್ಕೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ 25 ಸಾವಿರ ಎಕರೆ ಜಮೀನನ್ನು ಬಳಕೆ ಮಾಡಿಕೊಳ್ಳುತ್ತಿರುವ ಕ್ರಮಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದು ರಾಜ್ಯದ ಆದಾಯ ಸಂಗ್ರಹಕ್ಕಾಗಿ ಅಲ್ಲ, ಗ್ಯಾರಂಟಿಗಳಿಗೆ ಆದಾಯ ಮಾಡುವುದಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಆಡಳಿತ ಗಮನಿಸಿದರೆ ಐದು ವರ್ಷದಲ್ಲಿ ಎಲ್ಲವನ್ನು ಸ್ವಚ್ಛ ಮಾಡಿ ಸಾಲದ ಭಾರ ಇಟ್ಟು ಹೋಗುವಂತೆ ಕಾಣುತ್ತಿದೆ. ಈಗಾಗಲೇ ಸಾಕಷ್ಟು ಸಾಲವನ್ನು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಸ್ವತ್ತುಗಳನ್ನು ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಆಸ್ತಿಯನ್ನು ಅಡವಿಟ್ಟು ಸಾಲ ತೆಗೆದುಕೊಂಡಿದ್ದರು. ಒಂದು ಕಡೆಗೆ ಬೇರೆ ದೇಶದಲ್ಲಿ ಇದ್ದ ಬಂಗಾರವನ್ನು ನಮ್ಮ ದೇಶಕ್ಕೆ ತಂದು ಸ್ಟಾಕ್ ಮಾಡಿಕೊಳ್ಳುವ ಬಿಜೆಪಿ ಸರ್ಕಾರದ ಆಡಳಿತ ಇದೆ. ಮತ್ತೊಂದು ಕಡೆಗೆ ಸರ್ಕಾರಿ ಆಸ್ತಿಯನ್ನು ಹರಾಜು ಹಾಕಿ ಮಾರುವಂತಹ ಕಾಂಗ್ರೆಸ್ ಆಡಳಿತ ಇದೆ. ಈ ಎರಡು ಸರ್ಕಾರಗಳ ವ್ಯತ್ಯಾಸವನ್ನು ನೀವೇ ಗುರುತಿಸಬೇಕು ಎಂದರು.
ಈಗಾಗಲೇ ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರನ್ನು ತಟ್ಟಿದೆ. ಇಂಧನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಚರಂತಿಮಠ, ಬೇರೆ ರಾಜ್ಯ ತೆಗೆದುಕೊಂಡು ನಾವೇನು ಮಾಡೋಣ? ನಮ್ಮ ರಾಜ್ಯದ್ದು ನಾವು ಹೇಳುತ್ತೇವೆ. ಬೇರೆ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರ್ಕಾರಗಳು ಇಂಧನ ಬೆಲೆ ಹೆಚ್ಚಿಸಿದರೆ ಇವರು(ಕಾಂಗ್ರೆಸ್) ಪ್ರತಿಭಟನೆ ಮಾಡಲಿ, ಬೇಡ ಎನ್ನುವವರು ಯಾರು ಎಂದು ಪ್ರಶ್ನಿಸಿದರು.
ಈಗಾಗಲೇ ರಾಜ್ಯದಲ್ಲಿ ಸ್ಟಾೃಂಪ್ ತೆರಿಗೆ, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ನೋಂದಣಿ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಹೆಸರು ಹೇಳಿಕೊಂಡು ಎಲ್ಲವನ್ನು ಹಾಳು ಮಾಡುತ್ತಿದ್ದಾರೆ. ಆಡಳಿತ ಎನ್ನುವಂತದ್ದು ಏನೂ ಉಳಿದಿಲ್ಲ. ಬರೀ ಕೊಲೆ, ಸುಲಿಗೆ ಹೆಚ್ಚಾಗಿವೆ. ಪೊಲೀಸ್ ಇಲಾಖೆ ತುಂಬ ನಿಷ್ಕ್ರೀಯವಾಗಿದೆ. ಅವರಿಗೆ ಅಧಿಕಾರ ಇಲ್ಲವೂ ಏನೋ? ಗ್ಯಾರಂಟಿ ಕೊಟ್ಟರೆ ಎಲ್ಲವೂ ಮುಚ್ಚಿಕೊಂಡು ಹೋಗುತ್ತದೆ ಎಂದುಕೊಂಡಿದ್ದರು. ಆದರೆ, ಅದರಿಂದ ಏನು ಉಪಯೋಗ ಆಗಲ್ಲ ಎಂದು ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯದ ವಿ. ಸೋಮಣ್ಣ ರೈಲ್ವೆ ಸಚಿವರಾಗಿದ್ದಾರೆ. ಈಗಲಾದರೂ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ವೇಗ ಸಿಗುತ್ತಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಚರಂತಿಮಠ, ಅಪೂರ್ಣವಾಗಿರುವ ರಾಜ್ಯದ ಒಂಬತ್ತು ರೈಲ್ವೆ ಯೋಜನೆಗಳನ್ನು ಮುಂದಿನ ಎರಡು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಅವರೇ ಹೇಳಿದ್ದಾರೆ. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು. ಇನ್ನು ನಮ್ಮ ಜಿಲ್ಲೆಯ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆ ಆಗಬೇಕು. ಈಗ ಸಂಪೂರ್ಣ ಟೆಂಡರ್ ಆಗಿದೆ. ಕಾಮಗಾರಿ ಆರಂಭಗೊಂಡಿದೆ. ಗದಗ-ಹುಟಗಿ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.