

ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿಯ ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು 30 ಸಾವಿರ ರೂ. ಮೌಲ್ಯದ 499 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ತಾಲೂಕು ಹೊಳಲೂರಿನ ಸದ್ದಾಂ ಹುಸೇನ್ ಅಲಿಯಾಸ್ ಸಾಂಬಾ (30), ಭದ್ರಾವತಿ ವೀರಾಪುರದ ಇಬ್ರಾಹಿಂ ಅಲಿಯಾಸ್ ಟಕ್ಕರ್ (21) ಮತು ಕಡದಕಟ್ಟೆಯ ಸಂತೋಷ್‌ಕುಮಾರ್ (30) ಬಂಧಿತರು. ಗುರುವಾರ ಸೂಳೆಬೈಲ್‌ನ ಪುಟ್ಟಪ್ಪ ಕ್ಯಾಂಪ್ ಬಳಿ ಗಾಂಜಾ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸದ್ದಾಂ ಹುಸೇನ್‌ನನ್ನು ಬಂಧಿಸಿದ್ದಾರೆ.
ಡಿಸಿಆರ್‌ಬಿ ಡಿವೈಎಸ್ಪಿ ಡಿ.ಟಿ.ಪ್ರಭು ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 338 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಳೇಬಾರಂದೂರಿನ ಕಡೆಯಿಂದ ಭದ್ರಾವತಿಗೆ ಕಡೆಗೆ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಡಿವೈಎಸ್ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಪೇಪರ್‌ಟೌನ್ ಠಾಣೆ ಪಿಎಸ್‌ಐ ಕವಿತಾ ಅವರ ನೇತೃತ್ವದ ತಂಡ ದಾಳಿ ನಡೆಸಿ ಇಬ್ರಾಹಿಂ ಮತ್ತು ಸಂತೋಷ್‌ಕುಮಾರ್‌ನನ್ನು ಬಂಧಿಸಿ 161 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.