

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೀಪ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಕೌಶಲ ಮತ್ತು ಜೀವನೋಪಾಯ ಇಲಾಖೆಯ ಹಾಗೂ ಜಿ.ಪಂ. ಸಹಯೋಗದಲ್ಲಿ ಸ್ವಸಹಹಾಯ ಗುಂಪುಗಳಿಂದ ದೀಪಾವಳಿ ಪ್ರಯುಕ್ತ ತಯಾರಾದ ಮಣ್ಣಿನ ದೀಪಗಳ ಮಾರಾಟ ಮತ್ತು ಪ್ರದರ್ಶನವನ್ನು ಜಿಪಂ ಯೋಜನಾ ನಿರ್ದೇಶಕ ವಿಠಲ್ ಕಾವಳೆ ಮಂಗಳವಾರ ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿದರು.
ಕೋರಮಂಗಲ ಶಾರದಾಂಬ ಸ್ವಸಹಾಯ ಸಂಘ ಮತ್ತು ಹಾರೋಹಳ್ಳಿ ನಿತ್ಯಾ ಸಂಜೀವಿನಿ ಸ್ವಸಹಾಯ ಸಂಘಗಳು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಂದ ಸಮುದಾಯ ಬಂಡವಾಳ ನಿಧಿ ಪಡೆದುಕೊಂಡು ಮಣ್ಣಿನ ಮಡಿಕೆ, ಮಣ್ಣಿನ ದೀಪಗಳು, ಅಲಂಕಾರಿಕ ವಸ್ತುಗಳ ತಯಾರಿಕೆಯನ್ನು ತೊಡಗಿಕೊಳ್ಳುವ ಮೂಲಕ ಜೀವನ ನಡೆಸುತ್ತಿದ್ದು, ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ದಿನ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಇದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಬ್ಬ ಮುಗಿಯುವವರೆಗೂ ಮಳಿಗೆಗಳ ತೆರೆಯಲಾಗುವುದು ಎಂದು ವಿಠಲ್ ಕಾವಳೆ ತಿಳಿಸಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥಗೌಡ ಮಾತನಾಡಿ, ತಾಲೂಕಿನಲ್ಲಿ ಒಟ್ಟು 1049 ಸ್ವಸಹಾಯ ಸಂಘಗಳ ಒಟ್ಟು 15680 ಸದಸ್ಯರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ನೋಂದಣಿಯಾಗಿವೆ ಎಂದರು.
ಸ್ವಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಸಂಘಕ್ಕೆ, ಸುತ್ತುನಿಧಿ, ದುರ್ಬಲ ವರ್ಗದವರ ನಿಧಿ, ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆ ಅನುದಾನ, ಬಡ್ಡಿ ಸಹಾಯಧನ, ಮಾಸಿಕ ಸಂತೆ ನಡೆಸಲು ಗ್ರಾಮಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಅನುದಾನ ನೀಡುವು ಒಳಗೊಂಡು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ, ವಿವಿಧ ಗೃಹ ಬಳಕೆ ವಸ್ತುಗಳನ್ನು, ವಿವಿಧ ಆರ್ಥಿಕ ಚಟುವಟಿಕೆಗಳನ್ನಯ ಕೈಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಜನ ಈ ಬಾರಿ ದೀಪಾವಳಿಗೆ ಹೆಚ್ಚಿನ ರೀತಿಯಲ್ಲಿ ಸ್ವಸಹಾಯ ಸಂಘದ ಉತ್ಪನ್ನಗಳನ್ನು ಕೊಳ್ಳುವ ಮೂಲಕ ಮಹಿಳೆಯನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.