

ಬೆಳಗಾವಿ: ಸರಿಸಮಾನ ವೇತನ, ಭತ್ಯೆ ಹಾಗೂ ಬಡ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
2013ಕ್ಕಿಂತ ಮೊದಲು ಬಡ್ತಿಯಾಗಿರುವ ಹಾಗೂ ಹಿರಿಯ ವೈದ್ಯಾಧಿಕಾರಿಗಳಾಗಿ ಬಡ್ತಿ ಹೊಂದಿರುವ ವೈದ್ಯರ ವೇತನ ವ್ಯತ್ಯಾಸ ಸರಿಪಡಿಸಬೇಕು. ಹಲವು ವರ್ಷಗಳಿಂದ ವೈದ್ಯಾಧಿಕಾರಿಗಳು, ಡಿ ದರ್ಜೆ ನೌಕರರು ಔಷಧ ವಿತರಕರ ಹುದ್ದೆಗಳು ಖಾಲಿ ಇದೆ. ಹೀಗಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು, ದೈನಂದಿನ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಮನವಿ ನೀಡಿದರು.
ಕೋವಿಡ್-19 ಚಿಕಿತ್ಸಾ ಕೇಂದ್ರಗಳಲ್ಲಿ ಸ್ವಯಂ ಅಪೇಕ್ಷೆಯಿಂದ ಆಯುಷ್ ವೈದ್ಯ ಪದ್ಧತಿಗಳ ಚಿಕಿತ್ಸೆ ಪಡೆಯ ಬಯಸುವವರಿಗೆ ಒದಗಿಸಲು ಅವಕಾಶ ನೀಡಬೇಕು.
ಅಲ್ಲದೆ, ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಆಯುಷ್ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ವಿಸ್ತರಿಸಬೇಕು. ಆಯುಷ್ ಇಲಾಖೆಗೆ ಸೇರಿದ ವೈದ್ಯರು ನಿವೃತ್ತಿಯವರೆಗೂ ವೈದ್ಯಾಧಿಕಾರಿ ಎಂಬ ಒಂದೇ ಪದನಾಮದಿಂದ ಸೇವೆ ನಿರ್ವಹಿಸಲಾಗಿದೆ. ಆದ್ದರಿಂದ ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರಡಿಸಲಾಗುವ ಆದೇಶಗಳನ್ನು ಆಯುಷ್ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದಿಲ್ಲ. ಆದ್ದರಿಂದ ಸರ್ಕಾರದ ಆದೇಶವನ್ನು ಆಯುಷ್ ಇಲಾಖೆಗೂ ರವಾನಿಸಬೇಕು ಎಂದು ಒತ್ತಾಯಿಸಿದರು. ಡಾ. ಸೈಯದ್ ರಜಾಕ್, ಡಾ. ಬಿ.ಎಸ್. ಝಂಡೆ, ಡಾ. ಚಂದ್ರಶೇಖರ ಜಂಬಗಿ ಇತರರು ಇದ್ದರು.