

ಕೋಲಾರ: ದಿನಗೂಲಿ ನೌಕರರಾಗಿದ್ದ ಪೌರ ಕಾರ್ಮಿಕರ ಕೆಲಸ ಕಾಯಂ ಆಯಿತಾದರೂ ಈಗ ವೇತನದ ಸಮಸ್ಯೆ ಶುರುವಾಗಿದೆ. ಜಿಲ್ಲೆಯಲ್ಲಿ 3 ನಗರಸಭೆ, 3 ಪುರಸಭೆ ಹಾಗೂ 1 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬರೋಬ್ಬರಿ 5 ತಿಂಗಳಿಂದ ಸಂಬಳ ನೀಡದಿರುವ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳಿಯ ಸಂಸ್ಥೆಗಳಲ್ಲಿ ದಿನಗೂಲಿ ನೌಕರರಾಗಿದ್ದ ಹಲವರು ಕಾಯಂ ನೌಕರಿಗಾಗಿ ಅನೇಕ ಹೋರಾಟ ನಡೆಸಿಕೊಂಡು ಬಂದಿದ್ದರು. ಜತೆಗೆ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಮಣಿದ ರಾಜ್ಯ ಸರ್ಕಾರ ದಿನಗೂಲಿ ನೌಕರರನ್ನು ಕಾಯಂಗೊಳಿಸಲು ಆದೇಶಿಸಿದೆಯಾದರೂ ಈಗ ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ.
2017ರ ಆದೇಶದಂತೆ ದಿನಗೂಲಿ ನೌಕರರನ್ನು ಕಾಯಂಗೊಳಿಸಲು 2024ರ ಅಕ್ಟೋಬರ್1ರಂದು ಅರ್ಜಿ ಆಹ್ವಾನಿಸಲಾಗಿತ್ತು. ಆಗ 100ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ವೇಳೆ ಸುಮಾರು 66 ಮಂದಿಯನ್ನು ಕಾಯಂಗೊಳಿಸಿ, ಜಿಲ್ಲಾಧಿಕಾರಿ ನೇಮಕಾತಿ ಆದೇಶ ಪತ್ರ ವಿತರಿಸಿದ್ದರು.
ಕೋಲಾರ, ಬಂಗಾರಪೇಟೆ, ಮುಳಬಾಗಿಲು ಹಾಗೂ ಶ್ರೀನಿವಾಸಪುರದಲ್ಲಿ ಅಂದಿನಿಂದ ಕೆಲಸ ಮಾಡುತ್ತಿರುವವರಿಗೆ ವೇತನ ಮಾತ್ರ ಬಿಡುಗಡೆಯಾಗಿಲ್ಲ.
ಎಬೆಸ್ ಮಾಡದಿರುವುದಕ್ಕೆ ಸಮಸ್ಯೆ
ಕಾರ್ಮಿಕರು ಸೇವೆಗೆ ಹಾಜರಾಗಿ ಜಾತಿ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲೆಗಳನ್ನು ಆಯಾ ಸ್ಥಳಿಯ ಸಂಸ್ಥೆಯ ಪೌರಾಯುಕ್ತರಿಗೆ, ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಜತೆಗೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಸಿಂಧುತ್ವ ಆಗಿದ್ದವು. ಆದರೆ ಸ್ಥಳಿಯ ಸಂಸ್ಥೆಗಳ ಯೋಜನಾ ನಿರ್ದೇಶಕರ ಕಚೇರಿಯಿಂದ ಎಬೆಸ್ ಮಾಡದೆ ಇರುವುದು ಸಕಾಲಕ್ಕೆ ವೇತನ ಪಾವತಿ ಆಗದಿರುವುದಕ್ಕೆ ಕಾರಣ ಎಂದು ಪೌರ ಕಾರ್ಮಿಕರು ದೂರಿದ್ದಾರೆ.
ಬಿಸಿಲು, ಚಳಿ, ಮಳೆಯನ್ನು ಲೆಕ್ಕಿಸದೆ ಸ್ವಚ್ಛ ಕಾರ್ಯದಲ್ಲಿ ತೊಡಗಿರುವ ನಮಗೆ ಕೆಲಸ ಕಾಯಂ ಆಯಿತು ಎಂಬ ಖುಷಿ ಇತ್ತು. ಒಂದೆರಡು ದಿನ ಸಂಬಳ ಆಗೋದು ತಡ ಆಗಬಹುದು ಎಂದೇ ಭಾವಿಸಿದ್ದೆವು. ಆದರೆ, ಇಷ್ಟೊಂದು ತಡವಾಗುತ್ತದೆ ಎಂದು ಊಹಿಸಿರಲಿಲ್ಲ ಎಂಬುದು ಪೌರ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಣಕ್ಕೆ ಬೇಡಿಕೆ ಆರೋಪ?
ವೇತನ ಬಿಡುಗಡೆಗಾಗಿ ಈಗಾಗಲೇ ರಾಜ್ಯ ಪೌರಾಡಳಿತ ನಿರ್ದೇಶನಾಲಯದಿಂದ ಎಬೆಸ್ ಆಗಿ ಬಂದಿದ್ದು, ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಎಬೆಸ್ ಮಾಡಲು ವಿಳಂಬ ಮಾಡುತ್ತಿದ್ದಾರೆ. ಇಲ್ಲಿ ಎಬೆಸ್ ಮಾಡಿದರೆ ಜಿಲ್ಲೆಯಲ್ಲಿ ನೇಮಕಗೊಂಡಿರುವ 66 ಮಂದಿ ಕಾರ್ಮಿಕರ ವೇತನ ಪಾವತಿಯಾಗುತ್ತದೆ. ಆದರೆ ಎಬೆಸ್ ಮಾಡಲು ಯೋಜನಾ ನಿರ್ದೇಶಕರ ಕಚೇರಿಯ ಸಿಬ್ಬಂದಿಯು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಮಸ್ಯೆಗಿಲ್ಲ ಸ್ಪಂದನೆ
ಮುಂಜಾನೆ ಎದ್ದು ಕಸ ವಿಲೇವಾರಿಗೆ ಹೋಗುತ್ತೇವೆ. ಜತೆಗೆ ಆರೋಗ್ಯ ನಿರೀಕ್ಷರು ಇರುವುದಿಲ್ಲ. ಆಕಸ್ಮಿಕವಾಗಿ ಏನಾದರು ತೊಂದರೆಯಾದರೆ ಕಾಪಾಡುವವರು ಇರುವುದಿಲ್ಲ ಎಂದು ಪೌರ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಪೌರ ಕಾರ್ಮಿಕರು ಎಂದರೆ ಅಧಿಕಾರಿಗಳು ಉದಾಸೀನ ತೋರುತ್ತಾರೆ. ಅಧಿಕಾರಗಳಂತೆ ನಾವೇನು ಮನುಷ್ಯರಲ್ಲವೇ? ಸಮಸ್ಯೆ ಹೇಳಿಕೊಳ್ಳಲು ಕಚೇರಿಗೆ ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರಿದ್ದಾರೆ.
ಕೋಟ್...
ಕಾಯಂ ಪೌರಕಾರ್ಮಿಕರಿಗೆ ವೇತನ ಮಾಡಲಾಗಿದೆ, ಯಾರ ವೇತನವು ಬಾಕಿಯಿಲ್ಲ.
> ಅಂಬಿಕಾ, ಯೋಜನಾ ನಿರ್ದೇಶಕಿ, ಕೋಲಾರ
ಹೋರಾಟ ಮಾಡಿ ಕಾಯಂ ಕೆಲಸ ಗಿಟ್ಟಿಸಿಕೊಂಡಿದ್ದೇವೆ, ಆದರೆ ವೇತನ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಯಾರನ್ನು ಕೇಳಬೇಕು ಎಂಬುದು ಅರ್ಥವಾಗುತ್ತಿಲ್ಲ. ನಗರಸಭೆಯಲ್ಲಿ ಕೇಳಿದರೆ ಪಿಡಿ ಕಚೇರಿಗೆ ಹೋಗಿ ಕೇಳಿ ಅಂತ ಹೇಳುತ್ತಾರೆ. ಅಲ್ಲಿಗೆ ಹೋದರೆ ಯಾರು ಸ್ಪಂದಿಸುತ್ತಿಲ್ಲ.
-ಹೆಸರು ಹೇಳಲು ಇಚ್ಛಿಸದ ಪೌರ ಕಾರ್ಮಿಕ.