

ಹಗರಿಬೊಮ್ಮನಹಳ್ಳಿ: ಸಕಾಲಕ್ಕೆ ಮಳೆಬಾರದೆ ಬೆಳೆಗಳು ಒಣಗಿದ್ದರಿಂದ ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಅಲ್ಪ ಮಳೆಗೆ ರೈತರು ಮುಂಗಾರು ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಮಳೆಯಾಗದೇ ಸಂಪೂರ್ಣ ಬೆಳೆ ಒಣಗಿರುವುದರಿಂದ ಹಗರಿಬೊಮ್ಮನಹಳ್ಳಿಯ ತಾಲೂಕಿನ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದೆ. ಬಿತ್ತನೆ ಖರ್ಚು ಮಾಡಿದ್ದರಿಂದ ರೈತರು ಸಾಲಗಾರರಾಗಿದ್ದಾರೆ. ತಹಸೀಲ್ದಾರ್ ಅವರು ಶೀಘ್ರವೇ ಜಿಲ್ಲಾಡಳಿತಕ್ಕೆ ಪ್ರಸ್ತುತ ಸ್ಥಿತಿಗತಿಯನ್ನು ವರದಿ ಕಳುಹಿಸಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಶೀಘ್ರವೇ ಘೋಷಣೆ ಮಾಡಿಸಲಿ ಎಂದು ಸಂಘ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಒತ್ತಾಯಿಸಿದರು.
ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರಿಗೆ ಸರ್ಕಾರಿ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ ನೀಡಲಾಗುವುದೆಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದುವರೆಗೂ ಯಾವುದೇ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿರುವುದು ಕೇವಲ ಕಡತಕ್ಕೆ ಸೀಮಿತವಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೆ.5 ರಂದು ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಿರಸ್ತೇದಾರ್ ಲಾವಣ್ಯಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:
ಎಪಿಎಂಸಿ ಸದಸ್ಯ ಮೈನಳ್ಳಿ ಕೊಟ್ರೇಶಪ್ಪ, ರೈತ ಸಂಘಟನೆಯ ತಾಲೂಕಾಧ್ಯಕ್ಷ ಹರಟೆ ಕಾಳಪ್ಪ, ತಾಲೂಕು ಕಾರ್ಯಾಧ್ಯಕ್ಷ ಎಚ್.ನಾಗರಾಜ, ಸಂಘಟನಾ ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ್, ಪ್ರಮುಖರಾದ ಕಿನ್ನಾಳ್ ಸುಭಾಷ್, ಎನ್.ವೀರಣ್ಣ, ಕೆ.ನಿಂಗಪ್ಪ, ಪಂಪಾಪತಿ, ಡಿ.ಅಬ್ದುಲ್ಲಾ, ತಿಂದಪ್ಪ, ಜಿ.ಮೆಹಬೂಬಸಾಬ್, ವಸಂತಕುಮಾರ್ ಇದ್ದರು.