ಅಕ್ಷರ ಕಲಿಸುವ "ಸಾಕ್ಷರ ಸಮ್ಮಾನ್​'

WEBBB
Published on

ಗ್ರಾಪಂ ಸದಸ್ಯರಿಗೆ ಶಿಕ್ಷಣ ನೀಡುವ ಯೋಜನೆ
 ನಾಳೆಯಿಂದ ತಾಲೂಕುಮಟ್ಟದಲ್ಲಿ ತರಬೇತಿ ಆರಂಭ

ಬಂಗಾರಪೇಟೆ: ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಹೊಣೆಗಾರಿಕೆ ಮತ್ತು ಜವಾಬ್ದಾರಿ ನಿರ್ವಹಿಸಲು ಅಗತ್ಯವಿರುವ ಓದು ಮತ್ತು ಬರಹ ತಿಳಿದವರಾಗಿರಬೇಕು. ಇಲ್ಲವಾದರೆ ಅವರ ಅಧಿಕಾರವನ್ನು ಮತ್ತೊಬ್ಬರು ಚಲಾಯಿಸಿ, ಪ್ರಜಾಪ್ರಭುತ್ವದ ಆಶಯಕ್ಕೇ ಧಕ್ಕೆಯಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಓದು ಬರಹ ಬಾರದ ಗ್ರಾಪಂ ಸದಸ್ಯರಿಗೆ ಅಕ್ಷರ ಕಲಿಸುವ "ಸಾಕ್ಷರ ಸಮ್ಮಾನ್​' ಯೋಜನೆ ರೂಪಿಸಿದ್ದ್ದು, ತಾಲೂಕಿನಲ್ಲಿ ಸೆ.1 ರಿಂದ ತರಗತಿಗಳು ಆರಂಭವಾಗಲಿವೆ.
ದಶಕಗಳ ಹಿಂದೆ ಅನಕ್ಷರಸ್ಥ ಜನರಿಗೆ ಅಕ್ಷರ ಕಲಿಸುವ ಸಲುವಾಗಿ ರಾತ್ರಿ ಶಿಕ್ಷಣವೊಂದು ಜಾರಿಯಲ್ಲಿತ್ತು. ಕಾಲ ಕಳೆದಂತೆ ರಾತ್ರಿ ಶಾಲೆಗಳು ಮರೆಯಾದವು. ಅದೇ ಮಾದರಿಯಲ್ಲಿ ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಅಕ್ಷರ ಕಲಿಸಲು ಸಾಕ್ಷರ ಸಮ್ಮಾನ್​ ಎಂಬ ಹೊಸ ಸಾಕ್ಷರತಾ ಯೋಜನೆ ವರದಾನವಾಗಿದೆ.
ಗ್ರಾಪಂ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯಲು ಸರ್ಕಾರ ಯಾವುದೇ ಕನಿಷ್ಠ ಶಿಕ್ಷಣದ ನಿಯಮ ನಿಗದಿಪಡಿಸಿಲ್ಲ. ಜನಪರ ಕಾಳಜಿಯುಳ್ಳ ಅನಕ್ಷರಸ್ಥರು ಸಹ ಗ್ರಾಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಜಿಲ್ಲೆಯ ಅನೇಕ ಗ್ರಾಪಂ ಚುನಾಯಿತ ಸದಸ್ಯರಿಗೆ ಓದು, ಬರಹ ತಿಳಿದಿಲ್ಲದ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಓದು, ಬರಹ ಕಲಿಸಲು ಮುಂದಾಗಿದೆ.


184 ಗ್ರಾಪಂ ಸದಸ್ಯರಿಗೆ ಶಿಕ್ಷಣ
ಜಿಲ್ಲೆಯಲ್ಲಿ ಒಟ್ಟು 184 ಗ್ರಾಪಂ ಸದಸ್ಯರಿಗೆ ಶಿಕ್ಷಣ ಇಲ್ಲವಾಗಿದ್ದು, ಬಂಗಾರಪೇಟೆ ಮತ್ತು ಕೆಜಿಎ್​ ತಾಲೂಕಿನಲ್ಲಿ 44, ಕೋಲಾರ ಮತ್ತು ಮಾಲೂರು ತಾಲೂಕಿನಲ್ಲಿ 47 ಮತ್ತು ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲೂಕಿನಲ್ಲಿ 93 ಅನರಸ್ಥ ಗ್ರಾಪಂ ಸದಸ್ಯರಿಗೆ ಸೆ.1 ರಿಂದ ತರಗತಿಗಳು ಆರಂಭವಾಗಲಿದೆ. ಗ್ರಾಪಂ ಗ್ರಂಥಾಲಯ ಅಥವಾ ನಿಗದಿ ಮಾಡಿದ ಸ್ಥಳದಲ್ಲಿ ತರಗತಿಗಳು ನಡೆಯಲಿದೆ.

ದಿನಕ್ಕೆರಡರಂತೆ 100 ಗಂಟೆಗಳ ಕಲಿಕೆ
ಅನಕ್ಷರಸ್ಥ ಎಂದು ಪರಿಗಣಿಸಲ್ಪಟ್ಟ ಗ್ರಾಪಂ ಸದಸ್ಯರಿಗೆ ಸಹಿ ಮಾಡಲು ಮಾತ್ರ ತಿಳಿಯುತ್ತಿದೆ. ಆದರೆ, ಅಕ್ಷರಗಳನ್ನು ಓದಿ ಅರ್ಥೈಸಿಕೊಳ್ಳಲು ಮತ್ತು ಬರೆಯಲು ತಿಳಿಯುತ್ತಿಲ್ಲ. ಈ ಕಾರಣಕ್ಕೆ ಅವರನ್ನು ಅನಕ್ಷರಸ್ಥ ಎಂದು ಪರಿಗಣಿಸಲಾಗುತ್ತಿದೆ. ಅವರನ್ನು ಅಕ್ಷರಸ್ಥರನ್ನಾಗಿಸಲು ಸಾಕ್ಷರತಾ ಸಮ್ಮಾನ್​ ಯೋಜನೆ ರೂಪಿಸಿದ್ದು, ಇದಕ್ಕಾಗಿ ಆಯಾ ತಾಪಂ ಮೂಲಕ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಬೋಧಕರು, ಅರಿವು ಕೇಂದ್ರದ ಮೇಲ್ವಿಚಾರಕರು, ಮುಖ್ಯ ತರಬೇತಿದಾರರು ಮತ್ತು ಡಿಟಿಸಿಗಳನ್ನು ಗುರುತಿಸಿ ತರಬೇತಿ ನೀಡಲಾಗುವುದು. ದಿನಕ್ಕೆ 2 ಗಂಟೆಗಳಂತೆ ಒಟ್ಟು 100 ಗಂಟೆಗಳ ಕಲಿಕೆ ಮತ್ತು ಬೋಧನೆ ನಡೆಯಲಿದೆ ಎಂದು ಡಿಟಿಸಿ ಆಶಾ ತಿಳಿಸಿದರು.

ಕಲಿಕೆ ನಂತರ ಮೌಲ್ಯಮಾಪನ
ಅಕ್ಷರ ಕಲಿಕೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಮತ್ತು ಅಬ್ದುಲ್​ ನಜೀರ್​ಸಾಬ್​ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸಂಸ್ಥೆಯ ಸಹಯೋಗದಲ್ಲಿ ಸಾಕ್ಷರ ಸಂದೇಶ ಎಂಬ ಪಠ್ಯ ಪುಸ್ತಕ ತಯಾರಿಸಿದ್ದು, 15 ಪಾಠಗಳನ್ನು ಈ ಪುಸ್ತಕ ಒಳಗೊಂಡಿದೆ. 5 ಮತ್ತು 10 ಪಾಠದ ನಂತರ ಕಲಿಕಾ ಪ್ರಗತಿಯ ಮೌಲ್ಯಮಾಪನ ನಡೆಯಲಿದ್ದು, 15 ಪಾಠದ ನಂತರ ಕಲಿಕಾ ಪ್ರಗತಿಯ ಅಂತಿಮ ಮೌಲ್ಯಮಾಪನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಗ್ರಾಪಂಗಳಲ್ಲಿ ಕೆಲ ಸದಸ್ಯರು ಅನರಸ್ಥರಾಗಿರುವುದರಿಂದ ಪಂಚಾಯಿತಿ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತಿದೆ. ಓದಲು ಮತ್ತು ಬರೆಯಲು ಬಾರದ ಕಾರಣ ಅವರು ಇತರರನ್ನು ಅವಲಂಬಿಸಬೇಕಿದೆ. ಜತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದೇ ದೊಡ್ಡ ಸವಾಲಾಗಿದೆ. ಸಾರ ಸಂದೇಶ ಕಾರ್ಯಕ್ರಮ ಸಹಕಾರಿಯಾಗಿದ್ದು, ಅಕ್ಷರ ಬರದ ಸದಸ್ಯರಿಗೆ ಅರಾನ ಬಂದರೆ ಪಂಚಾಯಿತಿ ನಿರ್ವಹಣೆಗೆ ಸಹಕಾರಿಯಾಗಲಿದೆ."
- ವಸಂತಕುಮಾರ್​, ಪಿಡಿಒ ದೋಣಿಮಡಗು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net