

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯಲ್ಲಿರುವ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ, ಪಠ್ಯೇತರ ಚಟುವಟಿಕೆ, ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಕಾರ್ಯಕ್ರಮಗಳ ಉದ್ಘಾಟನೆ ಶನಿವಾರ ನಡೆಯಿತು.
ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಸಮಾರಂಭ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗ ಕ್ಷೇತ್ರಕ್ಕೆ ಹಲವಾರು ಮಹನೀಯರನ್ನು ಕೊಡುಗೆಯಾಗಿ ಕೊಟ್ಟ ಗರಿಮೆ ಸಕ್ರಿ ಮಹಾವಿದ್ಯಾಲಯಕ್ಕೆ ಇದೆ. ಇಂತಹ ಅಪೂರ್ವ ಹಿನ್ನೆಲೆ ಹೊಂದಿರುವ ಸಂಸ್ಥೆಯ ಅವಿಭಾಜ್ಯ ಅಂಗವಾಗಿರುವ ಕಾನೂನು ವಿದ್ಯಾರ್ಥಿಗಳು ಉತ್ತಮ ಅಧ್ಯಯನದೊಂದಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿ ಮುಂದೆ ವಕೀಲೆಯಾಗಿ ವೃತ್ತಿ ಆರಂಭಿಸಿ ಇದೀಗ ನ್ಯಾಯಾಧೀಶೆಯಾಗಿದ್ದೇನೆ. ವಿದ್ಯಾರ್ಥಿಗಳು ಯಾವುದೇ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೂ ಅದರ ಜ್ಞಾನ, ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಸಂಸ್ಥೆಗೆ 70 ವರ್ಷಗಳ ಇತಿಹಾಸವಿದ್ದು, ವಿದ್ಯಾರ್ಥಿಗಳು ಇಲ್ಲಿ ಪ್ರವೇಶಾತಿ ಪಡೆದಿರುವುದು ಹೆಮ್ಮೆಯ ವಿಷಯ. ಕಾನೂನು ಕಲಿಕೆ ಭವಿಷ್ಯಕ್ಕೆ ಉತ್ತಮ ಅಡಿಗಲ್ಲಾಗಲಿ ಎಂದು ಹಾರೈಸಿದರು.
ಮಮತಾ ಕಲಾಲ ಪ್ರಾರ್ಥನೆ ಹಾಡಿದರು. ಬಾಬುಲಾಲ ದರಗದ ಸ್ವಾಗತಿಸಿದರು. ಭಾಗ್ಯಶ್ರೀ ಭಟ್ ವಂದಿಸಿದರು. ಅಬ್ದುಲ್ ಹಮೀದ್ ಮತ್ತು ಪ್ರೊ. ಪೂರ್ಣಿಮಾ ಕುರಡಿಕೇರಿ ಪರಿಚಯಿಸಿದರು. ಸ್ನೇಹಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ಹರಿಪ್ರಸಾದ, ಮಹಾವೀರ ಉಪಾಧ್ಯ, ಸುರೇಶ ಲಿಂಬಿಕಾಯಿ, ಡಾ. ದೀಪಾ ಪಾಟೀಲ, ಸಿ.ವಿ. ಸತೀಶ ಮುಂತಾದವರು ಉಪಸ್ಥಿತರಿದ್ದರು. ಕಾನೂನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರೋತ್ಸಾಹಧನ ನೀಡಲಾಯಿತು.